

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಅನುಷ್ಠಾನಗೊಳಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿರುವುದು ಸ್ವಾಗತ. ಆದರೆ, ಹನಿ ನೀರಾವರಿ ಯೋಜನೆ ಬದಲಾವಣೆ ಮಾಡಲು ನಿರ್ಧರಿಸಿರುವುದು ಸರಿಯಲ್ಲವೆಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ವಿಜಯವಾಣಿ ಜತೆ ಮಾತನಾಡಿ, ಸಿದ್ದರಾಮಯ್ಯ ಸಿಎಂ ಇದ್ದಾಗ ಯೋಜನೆಯನ್ನು ಹನಿ ನೀರಾವರಿಯಾಗಿ ಬದಲಿಸಲಾಗಿದೆ. ಅನುದಾನ ನೀಡಿ, ಕಾಲುವೆಯನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿ ನಡೆಯುತ್ತಿದ್ದು, ಅದನ್ನು ಬೇಗನೆ ಮುಗಿಸಿ ಅನುಷ್ಠಾನಗೊಳಿಸಬೇಕು. ಆದರೆ, ಯೋಜನೆಯನ್ನೇ ಬದಲಿಸಿರುವುದು ಸರಿಯಾದ ಕ್ರಮವಲ್ಲ. ಹನಿ ನೀರಾವರಿಗೆ ತಕ್ಕಂತೆ ಕಾಲುವೆಗಳನ್ನು ನಿರ್ಮಿಸಲಾಗಿದೆ. ಯೋಜನೆಗೆ 18 ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿ, ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ, ಕೊಪ್ಪಳ, ಯಲಬುರ್ಗಾ ಭಾಗಗಳು ನೀರಾವರಿಗೆ ಒಳಪಡಲಿವೆ. ಇದೀಗ ಮಧ್ಯಪ್ರದೇಶ ಮಾದರಿಯಲ್ಲಿ ರೈತರ ಹೊಲದವರೆಗೆ ನೀರು ನೀಡುತ್ತೇವೆ. ರೈತರೇ ಹನಿ ನೀರಾವರಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಕೈಗೊಂಡಿರುವುದು ನ್ಯಾಯವಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಇದನ್ನು ಪ್ರಶ್ನಿಸಬೇಕಿತ್ತು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಕೂಡಲೇ ಸರ್ಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು. ಸರ್ವ ಪಕ್ಷ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು. ಈ ಮೊದಲಿನಂತೆ ಯೋಜನೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.