

ವಿ.ಕೆ.ರವೀಂದ್ರ ಕೊಪ್ಪಳ
ಕೊಪ್ಪಳದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಿ ವರ್ಷ ಕಳೆದಿದ್ದು, ಬರೋಬ್ಬರಿ 3,185 ಜನರು ಪಾಸ್‌ಪೋರ್ಟ್ ಪಡೆದಿದ್ದಾರೆ. ವಿದೇಶ ಪ್ರವಾಸ ಕೈಗೊಳ್ಳಲು ಅವಶ್ಯವಾಗಿ ಬೇಕಾಗುವ ಪಾಸ್‌ಪೋರ್ಟ್, ಆಧಾರ್ ಕಾರ್ಡ್‌ನಷ್ಟೆ ಮುಖ್ಯ ಗುರುತಿನ ಚೀಟಿಯಾಗಿದೆ. ಅದನ್ನು ಪಡೆಯಬೇಕೆಂದರೆ ಜಿಲ್ಲೆಯ ಜನರು ಈ ಮೊದಲು ಹುಬ್ಬಳ್ಳಿಗೆ ತೆರಳಬೇಕಿತ್ತು. ಅರ್ಜಿ ಸಲ್ಲಿಕೆಯಲ್ಲಿ ಸಣ್ಣ ಲೋಪವಾದರೂ ಅಧಿಕಾರಿಗಳು ಪಾಸ್‌ಪೋರ್ಟ್ ನೀಡುವುದಿಲ್ಲ. ಅಲ್ಲದೆ, ತೀರಾ ಸಣ್ಣ ಪುಟ್ಟ ವಿಷಯಗಳಿಗೂ ಅರ್ಜಿದಾರರು ನಿಗದಿತ ಸಮಯಕ್ಕೆ ಸೇವಾ ಕೇಂದ್ರಕ್ಕೆ ತೆರಳಬೇಕಿತ್ತು. ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದ್ದು, ಜಿಲ್ಲೆಯಲ್ಲಿಯೇ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಅನುಮತಿ ನೀಡುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ಅವಧಿಯ ಕೇಂದ್ರ ಸರ್ಕಾರ ಅಂಚೆ ಇಲಾಖೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಮಂಜೂರು ಮಾಡಿದೆ. ಆದರೆ, ಸೂಕ್ತ ಅನುದಾನ ಹಾಗೂ ಕಟ್ಟಡ ಕೊರತೆಯಿಂದ ಕೇಂದ್ರ ಆರಂಭ ವಿಳಂಬವಾಯಿತು. ಬಳಿಕ ಸಂಸದ, ಶಾಸಕ ಹಾಗೂ ಜಿಲ್ಲಾಧಿಕಾರಿ ಹೆಚ್ಚು ಮುತವರ್ಜಿವಹಿಸಿದ ಪರಿಣಾಮ ಕಳೆದ ವರ್ಷ ಜ.28ರಂದು ಅಧಿಕೃತವಾಗಿ ಆರಂಭಿಸಲಾಗಿದೆ. ಇದರಿಂದ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವಾಗಿದೆ.
ಕೊಪ್ಪಳದ ಟಾಂಗಾಕೂಟ ಬಳಿಕ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಲಾಗಿದ್ದು, ದಿನವೊಂದಕ್ಕೆ ಗರಿಷ್ಠ 40 ಜನರ ಅರ್ಜಿ ಸ್ವೀಕರಿಸಲಾಗುತ್ತಿದೆ. ಈವರೆಗೆ 3,185 ಜನರು ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್ ಪಡೆದಿದ್ದಾರೆ. ಹುಟ್ಟಿದ ದಿನಾಂಕ ಹಾಗೂ ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಪರಿಶೀಲನೆ ಬಳಿಕ ವಿವಿಧ ಪ್ರಕ್ರಿಯೆ ನಡೆದು 30 ದಿನದಲ್ಲಿ ಪಾಸ್‌ಪೋರ್ಟ್ ಕೈಸೇರಲಿದೆ. ಇದಕ್ಕೆ 1,500ರೂ. ಶುಲ್ಕ ನಿಗದಿಪಡಿಸಿದ್ದು, ಆನ್‌ಲೈನ್‌ಲ್ಲೇ ತುಂಬಬೇಕಿದೆ. ಅರ್ಜಿದಾರರು ತಮ್ಮ ದಾಖಲೆಯನ್ನು ಸೇವಾ ಕೇಂದ್ರಕ್ಕೆ ಸಲ್ಲಿಸಿದ್ದಲ್ಲಿ, ಇಲ್ಲಿನ ಅಧಿಕಾರಿಗಳು ಪರಿಶೀಲಿಸಿ ಹುಬ್ಬಳ್ಳಿ ಪಾಸ್‌ಪೋರ್ಟ್ ಕಚೇರಿಗೆ ಕಳಿಸಲಿದ್ದಾರೆ. ನಂತರ ಮುಂದಿನ ಹಂತದ ಪ್ರಕ್ರಿಯೆ ನಡೆಯಲಿವೆ. ಸದ್ಯ ಇದರಿಂದ ಅರ್ಜಿ ಸಲ್ಲಿಕೆಗೆಂದೆ 110 ಕಿ.ಮೀ ದೂರ ಪ್ರಯಾಣಿಸುವುದು ತಪ್ಪಿದಂತಾಗಿದೆ.
ಕಾಯಂ ಸಿಬ್ಬಂದಿ ಇಲ್ಲ
ಅಂಚೆ ಕಚೇರಿಯಲ್ಲಿಯೇ ಸೇವಾ ಕೇಂದ್ರ ಆರಂಭಿಸಿದ್ದು, ಅಲ್ಲಿನ ಸಿಬ್ಬಂದಿಯೇ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರಕ್ಕೆ ಹೊಸ ಸಿಬ್ಬಂದಿಯನ್ನು ಇನ್ನು ನೇಮಿಸಿಲ್ಲ. ಪ್ರತಿ ತಿಂಗಳಿಗೆ ಸರಾಸರಿ 800-1,000 ಜನ ಅರ್ಜಿ ಸಲ್ಲಿಕೆಗೆ ಆಗಮಿಸಿದಲ್ಲಿ ಹೆಚ್ಚುವರಿ ಸಿಬ್ಬಂದಿ ನೀಡಲು ಅವಕಾಶವಿದೆ. ಅರ್ಜಿ ಸಲ್ಲಿಸಿ ನೀಡಿದ ದಾಖಲೆಯನ್ನು ಹುಬ್ಬಳ್ಳಿಗೆ ಕಳಿಸಲಾಗುತ್ತಿದೆ. ಅಲ್ಲಿನ ಸಿಬ್ಬಂದಿ ಪರಿಶೀಲಿಸಿ ಆನ್‌ಲೈನ್‌ಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಒಂದೊಮ್ಮೆ ಇಲ್ಲಿಯೇ ಅರ್ಜಿದಾರರ ಸಂಖ್ಯೆ ಹೆಚ್ಚಿದಲ್ಲಿ ಇಲ್ಲಿನ ಸಿಬ್ಬಂದಿ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ, ದಾಖಲೆಯನ್ನು ಅಪ್ಲೋಡ್ ಮಾಡಬಹುದು. ಇದರಿಂದ ಮತ್ತಷ್ಟು ಕಡಿಮೆ ಅವಧಿಯಲ್ಲಿ ಪಾಸ್‌ಪೋರ್ಟ್ ಪಡೆಯಲು ಅನುಕೂಲವಾಗಲಿದೆ.
ಮೊದಲು ಪಾಸ್‌ಪೋರ್ಟ್ ಪಡೆಯಬೇಕೆಂದರೆ ದೂರದ ಹುಬ್ಬಳ್ಳಿಗೆ ತೆರಳಬೇಕಿತ್ತು. ನಮ್ಮಲ್ಲಿಯೇ ಕೇಂದ್ರ ಆರಂಭಿಸಿರುವುದು ಸಾಕಷ್ಟು ಅನುಕೂಲವಾಗಿದೆ. ಸ್ಥಳೀಯವಾಗಿಯೇ ಪಾಸ್‌ಪೋರ್ಟ್ ದೊರೆಯುವುದರಿಂದ ಸಮಯ ಹಾಗೂ ಹೆಚ್ಚುವರಿ ಹಣ ಖರ್ಚು ಮಾಡುವಂತಿಲ್ಲ.
| ಆನಂದ ಅರ್ಜಿದಾರ
ನಿತ್ಯ ಗರಿಷ್ಠ 40 ಜನರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸೇವಾಕೇಂದ್ರ ಆರಂಭವಾಗಿ ವರ್ಷ ಕಳೆದಿದ್ದು, ಈವರೆಗೆ 3,185 ಜನರು ಅರ್ಜಿ ಸಲ್ಲಿಸಿ ಪಡೆದಿದ್ದಾರೆ. ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಕೇಂದ್ರ ಆರಂಭದಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ.
| ಶ್ರೀಕಾಂತ್ ಅಂಚೆ ಇಲಾಖೆಯ ಪಾಸ್‌ಪೋರ್ಟ್ ಸೇವಾ ಕೇಂದ್ರದ ನಿರ್ವಾಹಕ, ಕೊಪ್ಪಳ