ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ ಕಾರ್ಯಕ್ರಮ ಕೊಪ್ಪಳದಲ್ಲಿ ನೇರ ಪ್ರಸಾರ

27072020 Koppal Vertual programe
Published on

ವರ್ಚುವಲ್ ವೇದಿಕೆ ಆಯೋಜನೆ | ಕೃಷಿ ಸಚಿವ ಬಿ.ಸಿ.ಪಾಟೀಲ್ ಭಾಗಿ

ಕೊಪ್ಪಳ: ರಾಜ್ಯ ಸರ್ಕಾರ ಯಶಸ್ವಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ನೇಹಿ ಆಡಳಿತ ಒಂದು ವರ್ಷ, ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವರ್ಚುವಲ್ ವೇದಿಕೆ ಮೂಲಕ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವಾರ್ತಾ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಚಿವ ಪಾಟೀಲ್, ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಸಾಧನೆಯ ಕಿರುಪುಸ್ತಕ ಸವಾಲುಗಳ ಒಂದು ವರ್ಷ; ಪರಿಹಾರದ ಸ್ಪರ್ಶ ಹಾಗೂ ಜನಪದ, ಮಾರ್ಚ್ ಆಫ್ ಕರ್ನಾಟಕ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಶಿವನಗೌಡ ಪಾಟೀಲ್ ಸಂವಾದ ನಡೆಸಿದರು. ಕರೊನಾ ಸಮಯದಲ್ಲಿ ನರೇಗಾದನ್ವಯ ಹೊಲದಲ್ಲಿ ಬದು ನಿರ್ಮಿಸಿಕೊಂಡಿದ್ದೇನೆ. ನಮ್ಮ ಗ್ರಾಮದ 7 ಕುಟುಂಬಗಳು 16 ದಿನ ಕೆಲಸ ಮಾಡಿದ್ದು, ಪ್ರತಿಯೊಬ್ಬರಿಗೆ 4,400ರೂ. ಹಣ ಬಂದಿದೆ. ಅದನ್ನು ಮೊಬೈಲ್ ಎಟಿಎಂ ಮೂಲಕ ಮನೆಗೆ ತಲುಪಿಸಿದ್ದಾರೆ. ಕಷ್ಟಕಾಲದಲ್ಲಿ ಸ್ಪಂದಿಸಿದ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಿದರು. ಸಿಎಂ ಪ್ರತಿಕ್ರಿಯಿಸಿ ಜಿಲ್ಲೆಗೆ ಬಂದಾಗ ಭೇಟಿ ನೀಡುವ ಭರವಸೆ ನೀಡಿದರು.

ಜಿಪಂ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್‌ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ. ಮಾರುತಿ, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಜೆ.ಬಿ.ಮಜ್ಗಿ, ಜಿಲ್ಲಾ ವಾರ್ತಾಧಿಕಾರಿ ಜಿ.ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net