

ಕೊಪ್ಪಳ: ತೀವ್ರ ಕೂತೂಹಲ ಕೆರಳಿಸಿದ್ದ ತಾಲೂಕಿನ ಹುಲಗಿ ಗ್ರಾಮದ ಕೃಷಿ ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದು, ಪ್ರಭುರಾಜ ಪಾಟೀಲ ಬಣದ ವೆಂಕಟೇಶ ಬಿ. ಅಧ್ಯಕ್ಷರಾಗಿ ಆಯ್ಕೆಯಾದರು.
ಏಳು ಮತ ಪಡೆದ ವೆಂಕಟೇಶ ಕೇವಲ ಒಂದು ಮತ ಅಂತರದಿಂದ ಗೆದ್ದರು. ಕಾಂಗ್ರೆಸ್ಬೆಂಬಲಿತ ಪಾಲಾಕ್ಷಪ್ಪ ಗುಂಗಾಡಿ ಬಣದ ಧರ್ಮರಾಜ ರಾವ್ ಆರು ಮತ ಪಡೆದು ಪರಾಜಿತರಾದರು. ವಿನಯಕುಮಾರ ಜೈನ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವವಾಗಿ ಆಯ್ಕೆ ಮಾಡಲಾಯಿತು.
ಕೃಷಿ ಪತ್ತಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿಸಲು ತೀವ್ರ ಪ್ರಯತ್ನ ಪಟ್ಟರು. ಆದರೆ, ಬಿಜೆಪಿ ಮುಖಂಡರ ತಂತ್ರ ಸಲವಾಯಿತು. ಶಾಸಕ ರಾವೇಂದ್ರ ಹಿಟ್ನಾಳ ಪ್ರತಿನಿಧಿಸುವ ಜಿಪಂ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಕ್ಕೆ ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.