ಕೊಪ್ಪಳ ಜಿಲ್ಲಾದ್ಯಂತ ಸಂಭ್ರಮದ ಈದ್ ಆಚರಣೆ

KOPPAL DISTRICT ED FESTIVAL CELEBRATION
ಈದ್ ಮಿಲಾದ್ ಅಂಗವಾಗಿ ಗುರುವಾರ ಕೊಪ್ಪಳದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
Published on

ಕೊಪ್ಪಳ: ಪ್ರವಾದಿ ಮೊಹ್ಮದ್ ಪೈಗಂಬರ ಅವರ ಜನ್ಮ ದಿನ ಅಂಗವಾಗಿ ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಗುರುವಾರ ಸಂಭ್ರಮದ ಈದ್ ಹಬ್ಬ ಆಚರಿಸಲಾಯಿತು.

ಬುಧವಾರದಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಸೀದಿಗಳಲ್ಲಿ ಜಾಗರಣೆ, ಸಾಮೂಹಿಕ ಪ್ರಾರ್ಥನೆ ನಡೆದವು. ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಅಲ್ಲಾಹುವಿಗೆ ನಮಿಸಿದರು.

ಗುರುವಾರ ಬೆಳಗ್ಗೆ ಗೌರಿ ಅಂಗಳದಿಂದ ಶುರುವಾರ ಮೆರವಣಗೆ ಗಡಿಯಾರ ಕಂಬ ವೃತ್ತ, ಶಾರದಾ ಚಿತ್ರಮಂದಿರ, ಸಾಲಾರಜಂಗ್ ರಸ್ತೆ, ಅಶೋಕ ವೃತ್ತ, ಜವಾಹರ ರಸ್ತೆ ಮೂಲಕ ಯೂಸೂಫಿಯಾ ಮಸೀದಿವರೆಗೆ ಶಾಂತಿಯಿಂದ ಸಾಗಿತು.

ಹಿರಿ-ಕಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು ಮೆರಗು ತಂದರು. ಇಸ್ಲಾಂ ಧರ್ಮದ ಬಾವುಟ, ಮೆಕ್ಕಾ,ಮದಿನಾ ಸ್ಥಬ್ಧ ಚಿತ್ರಗಳು ನೋಡುಗರನ್ನು ಸೆಳೆದವು.

ದಾರಿಯುದ್ದಕ್ಕೂ ಅಲ್ಲಲ್ಲಿ ಮೆರವಣಿಗೆ ಹೊರಟವರಿಗೆ ಹಣ್ಣು, ಜ್ಯೂಸ್, ಶರಬತ್ ನೀಡಲಾಯಿತು. ಅಶೋಕ ವೃತ್ತದಲ್ಲಿ ಹಿಂದು ಮಹಾ ಮಂಡಳಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.

ಯೂಸೂಫೀಯಾ ಮಸೀದಿಯಲ್ಲೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸೇವೆ ಜರುಗಿಸಲಾಯಿತು. ಶಾಸಕ ಹಿಟ್ನಾಳ್ ಕೆಲ ಸಮಯ ಮೆರವಣಿಗೆ ಟ್ರಾೃಕ್ಟರ್ ಚಲಾಯಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ್, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಮೆರವಣಿಗೆಯಲ್ಲಿ ಭಾಗಿಯಾಗಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net