ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

01032021 Koppal Advocate insist
Published on

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ

ಕೊಪ್ಪಳ: ಇತ್ತೀಚೆಗೆ ವಕೀಲರ ಮೇಲೆ ಹಲ್ಲೆಗಳು ಹೆಚ್ಚುತ್ತಿದ್ದು, ನಮ್ಮ ರಕ್ಷಣೆಗೆ ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ವಕೀಲ ತಾರಿಹಳ್ಳಿ ವೆಂಕಟೇಶನನ್ನು ಫೆ.27ರಂದು ಹಾಡಹಗಲೇ ಹತ್ಯೆ ಮಾಡಲಾಗಿದೆ. ಫೆ.17ರಂದು ತೆಲಂಗಾಣದಲ್ಲಿ ವಕೀಲ ವಾಮನರಾವ್ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹಿಂದೆಯೂ ವಕೀಲರ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿವೆ. ಜನರ ಸೇವೆ ಸಲ್ಲಿಸುತ್ತಿರುವಲ್ಲಿ, ಕಾನೂನು ರಕ್ಷಣೆಯಲ್ಲಿ ನಾವು ಶ್ರಮಿಸುತ್ತಿದ್ದೇವೆ. ಆದರೆ, ನಮ್ಮ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ವಕೀಲರ ರಕ್ಷಣೆಗೆ ಸರ್ಕಾರ ಸೂಕ್ತ ಕಾನೂನು ರೂಪಿಸಿ ಜಾರಿ ಮಾಡಬೇಕು. ಈ ಮೂಲಕ ವಕೀಲರ ಪ್ರಾಣ ರಕ್ಷಣೆ, ಕುಟುಂಬ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಎಡಿಸಿ ಎಂ.ಪಿ.ಮಾರುತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್.ಮುರಡಿ, ಕಾರ್ಯದರ್ಶಿ ಬಸವರಾಜ ಸಜ್ಜನ್, ಉಪಾಧ್ಯಕ್ಷ ಜಿ.ಸಿ.ಗಮ್ಮಿಗಿ, ಪೀರಾಹುಸೇನ್ ಹೊಸಳ್ಳಿ, ಎ.ವಿ.ಕಣವಿ, ಹನುಮಂತ ಕೆಂಪಳ್ಳಿ, ರಾಕೇಶ ಪಾನಘಂಟಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net