ಕೆಕೆಆರ್‌ಡಿಬಿಯಡಿ ಅಂಗನವಾಡಿಗೆ ಸ್ವಂತ ಕಟ್ಟಡ ಕಲ್ಪಿಸಿ: ಸಚಿವ ಹಾಲಪ್ಪ ಆಚಾರ್ ಸೂಚನೆ

31072022 koppal meeting
Published on

ಕೊಪ್ಪಳ: ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವುದು ಸೇರಿ ಇಲಾಖೆಯ ಎಲ್ಲ ಕೆಲಸಗಳು ಪಾರದರ್ಶಕವಾಗಿರಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಇತರ ಇಲಾಖೆ ಕೆಲಸಗಳ ಜತೆಗೆ ಅಂಗನವಾಡಿ ಮಕ್ಕಳಿಗೆ ಶಾಲಾಪೂರ್ವ ತರಬೇತಿ ನೀಡುತ್ತಿದ್ದಾರೆ. ಅವರ ಗೌರವಧನ ಪಾವತಿಯಲ್ಲಿ ವಿಳಂಬ ಮಾಡಬಾರದು. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಸೂರು ಒದಗಿಸಬೇಕು. ಕೆಕೆಆರ್‌ಡಿಬಿ ಅನುದಾನದಲ್ಲಿ ಕಟ್ಟಡಕ್ಕೆ ಅನುದಾನ ಕೋರಿ ಸಂಬಂಧಿಸಿದ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಬೇಕು. ನಿವೇಶನ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಯಾವುದೇ ಯೋಜನೆ ಅನುಷ್ಠಾನದಲ್ಲಿ ಅಕ್ರಮ, ಅವ್ಯವಹಾರ ಸಹಿಸುವುದಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಅಪಘಾತದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಪ್ರಕರಣಗಳಲ್ಲಿ ಕೂಡಲೇ ಸಂತ್ರಸ್ತರನ್ನು ಭೇಟಿ ಮಾಡಿ ಇಲಾಖೆಯಡಿ ಲಭ್ಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.

ಇಲಾಖೆ ಕಾರ್ಯದರ್ಶಿ ಡಾ.ರೇಜು ಎಂ.ಟಿ. ಮಾತನಾಡಿ, ಜಿಲ್ಲೆಯ ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದಲ್ಲಿ ಬೇರೆ ಜಿಲ್ಲೆಗಳಿಗಿಂತ ವಿಭಿನ್ನವಾದ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಕ್ಕಳಲ್ಲಿ ಕಲಿಕಾ ಉತ್ಸಾಹ ಹೆಚ್ಚಿಸುವ ಮೂಲಕ ಎಲ್ಲ ಜಿಲ್ಲೆಗಳಿಗೆ ಕೊಪ್ಪಳ ಮಾದರಿಯಾಗಿದೆ. ಇಲ್ಲಿನ ಅಂಗನವಾಡಿ ಪಠ್ಯಕ್ರಮದ ಮಾದರಿಯನ್ನು ಅವಲೋಕಿಸಲು ರಾಜ್ಯದ ಬೇರೆ ಬೇರೆ ಜಿಲ್ಲೆಯ 35 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶಾಲಾ ಪೂರ್ವ ಶಿಕ್ಷಣದ ಬಗ್ಗೆ 3 ದಿನಗಳ ತರಬೇತಿ, ಅಂಗನವಾಡಿ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿರುವುದರಿಂದ ಬೇರೆ ಜಿಲ್ಲೆಗಳಲ್ಲಿಯೂ ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಕಲಿಕಾ ಟಾಟಾ ಟ್ರಸ್ಟ್‌ನ ಶಿವಕುಮಾರ, ಅರ್ಚನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net