ಪ್ರಜೆಗಳು ಬೆಸೆದ ಪ್ರಭುತ್ವ

koppal democracy day celebration minister shivaraj tangadagi
Published on

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಮಾನವ ಸರಪಳಿ ರಚನೆ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಮಹಿಳೆ, ಮಕ್ಕಳು, ಸಂ&ಸಂಸ್ಥೆ, ಜನಪ್ರತಿನಿಧಿಗಳು, ಸಾರ್ವನಿಕರು ಸಡಗರದಿಂದ ಭಾಗಿಯಾಗಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ಜಿಲ್ಲೆಯಲ್ಲಿ 53 ಸಾವಿರ ಜನರು 53 ಕಿ.ಮೀ. ಮಾನವ ಸರಪಳಿ ರಚಿಸಿದ್ದು ವಿಶೇಷವಾಗಿತ್ತು.

ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದಿಂದ ಆರಂಭವಾದ ಸರಪಳಿ ಮುನಿರಾಬಾದ್​ ಗ್ರಾಮದ ಅಂಚಿನವರೆಗೆ ರಚಿಸಲಾಯಿತು. ಆಯಾ ಗ್ರಾಮಗಳಲ್ಲಿ ಅಲ್ಲಿನ ಜನರನ್ನು ಒಟ್ಟುಗೂಡಿಸಲಾಯಿತು. ಪ್ರತಿ 100 ಮೀಟರ್​ಗೆ ಒಂದರಂತೆ ತಂಡ ರಚಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ಆರಂಭಿಸಲಾಯಿತು. ಗ್ಯಾರಂಟಿ ಯೋಜನೆ ಫಲಾನುಭವಿಗಳು, ವಿದ್ಯಾರ್ಥಿಗಳು, ಎನ್​ಜಿಒಗಳ ಸದಸ್ಯರು, ಅಧಿಕಾರಿಗಳು ಭಾಗಿಯಾದರು. ಬೆಳಗಟ್ಟಿ&ಹಟ್ಟಿ&ರುನಾಥನಹಳ್ಳಿ&ಅಳವಂಡಿ&ಸಿಂದೋಗಿ&ಚಿಕ್ಕ ಸಿಂದೋಗಿ&ಕೊಪ್ಪಳ&ಗಿಣಗೇರಾ& ಹಿಟ್ನಾಳ ಟೋಲ್​&ಹೊಸಳ್ಳಿ&ಲಿಂಗಾರಪುರ&ಮುನಿರಾಬಾದ್​ವರೆಗೆ ನಿರ್ಮಿಸಲಾಯಿತು. ಮುನಿರಾಬಾದ್​ ಜಲಾಶಯದಲ್ಲಿ ಪ್ರತ್ಯೇಕ ಮಾನವ ಸರಪಳಿ ರಚಿಸಿದ್ದು ವಿಶೇಷವಾಗಿತ್ತು.

ಅಲ್ಲಲ್ಲಿ ತಳಿರು ತೋರಣಗಳಿಂದ ಸ್ವಾಗತ ಕಮಾನು ರಚಿಸಿದ್ದು ಕಂಡುಬಂತು. ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಮಹಿಳೆಯರು ಸಂಭ್ರಮಿಸಿದರು. ಮಕ್ಕಳು ರಾಷ್ಟ್ರಧ್ವಜ, ಸಂವಿಧಾನ ಪ್ರಸ್ತಾವನೆ ಮಾಹಿತಿ ಪತ್ರ ಹಿಡಿದು ಕಾಣಿಸಿಕೊಂಡರು. ಎನ್​ಸಿಸಿ, ಸ್ಕೌಟ್ಸ್​ಗೈಡ್ಸ್​, ಸೇವಾದಳ ವಿದ್ಯಾರ್ಥಿಗಳ ಶಿಸ್ತು ಗಮನ ಸೆಳೆಯಿತು. ಅಲ್ಲಲ್ಲಿ ಕುಡಿವ ನೀರು, ಬಿಸ್ಕತ್​ ಮಕ್ಕಳಿಗೆ ನೀಡಿದರು.

ಸಂವಿಧಾನ ಪೀಠಿಕೆ ಓದು : ಕೊಪ್ಪಳದ ಅಶೋಕ ವೃತ್ತದಲ್ಲಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜರುಗಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ನೆರೆದವರಿಗೆ ಪೀಠಿಗೆ ಓದಿಸಿದರು. ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸೆ.15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ರಾಜ್ಯದ ಜನರಿಗೆ ಗೊತ್ತಾಗುವಂತೆ ಮಾಡಲು ಮಾನವ ಸರಪಳಿ ರಚಿಸಲಾಗುತ್ತಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ನಮ್ಮ ಉದ್ದೇಶ. ಕಳೆದ ಬಾರಿ ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಿಸಲಾಗಿತ್ತು. ಈ ಬಾರಿ ಬೃಹತ್​ ಮಾನವ ಸರಪಳಿ ರಚಿಸಿ ಹೊಸ ದಾಖಲೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮ ಬಳಿಕ ಸಚಿವ, ಸಂಸದ, ಶಾಸಕ, ವಿಪ ಸದಸ್ಯರು ಮಾನವ ಸರಪಳಿಯಲ್ಲಿ ಭಾಗಿಯಾದರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಜಿಲ್ಲಾಧಿಕಾರಿ ನಲಿನ್​ ಅತುಲ್​, ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಎಎಸ್ಪಿ ಹೇಮಂತ್​ ಕುಮಾರ್​, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲ ಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net