

ಕೊಪ್ಪಳ: ಶಿಕ್ಷಕರಲ್ಲಿ ವಿಷಯ ಜ್ಞಾನದೊಂದಿಗೆ ಕೌಶಲ ಮತ್ತು ಬೋಧನಾ ತಂತ್ರ ಅಳವಡಿಸಿಕೊಳ್ಳುವಿಕೆ ಅವಶ್ಯ ಎಂದು ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾಡಳಿತದಿಂದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣಿತದ ಸಾಮರ್ಥ್ಯ,ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳು ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಲಿಕೆ ಜತೆಗೆ ಚರ್ಚಾ ವಿಧಾನ ಹೆಚ್ಚು ಬಳಸಿ. ನಮ್ಮ ಆಲೋಚನೆಗಳು ನಮ್ಮ ಸಾಧನೆಗೆ ದಾರಿಯಾಗಬೇಕು. ಶಿಕ್ಷಕರಲ್ಲಿ ವಿಷಯ ಜ್ಞಾನ ಇದ್ದರೂ ಕಲಿಸುವ ಕೌಶಲ ಇಲ್ಲದಿದ್ದರೆ ಕಲಿಕಾ ಪ್ರಕ್ರಿಯೆ ಪರಿಣಾಮಕಾರಿಯಾಗುವುದಿಲ್ಲ. ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಿ ಎಂದರು.
ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣಿತದ ಪರಿಕಲ್ಪನೆಗಳನ್ನು ಮೂರ್ತ ರೂಪದಲ್ಲಿ ತಿಳಿಸುವ, ಅರ್ಥೈಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಗಣಿತ ಶಿಕ್ಷಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಯೋಜನಾ ಅಭಿಯಂತರ ಡಾ.ಸೈಯದ ಸಮೀರ್ ಮಾತನಾಡಿದರು.
ಶಿಕ್ಷಕರಾದ ನಾಗೇಶ ಕೆ.ಒ., ಹರಿಕೃಷ್ಣ ಹೊಳ್ಳ ಡಾ.ಸೈಯದ್ ಸಮೀರ್ ಗಣಿತವನ್ನು ಸರಳವಾಗಿ ಬೋಧಿಸುವ ಬಗ್ಗೆ ತಿಳಿಸಿದರು.ಪ್ರೋಜೆಕ್ಟ್ ಅಸೋಸಿಯೇಟರ್ ವಿಶ್ವಪ್ರಸನ್ನ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಮೈಲಾರಪ್ಪ, ಪೂಜಾ, ಗುರುಸ್ವಾಮಿ ಇತರರಿದ್ದರು.