

ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಸಂಬಂಧಿಸಿದ ಮತಗಟ್ಟೆ ಅಥವಾ ತಹಸೀಲ್ ಕಚೇರಿಗಳಲ್ಲಿ ಮತದಾರರು ಪರಿಶೀಲಿಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 1,314 ಮತಗಟ್ಟೆಗಳಿದ್ದು, 5,70,651 ಪುರುಷ, 5,76,652 ಮಹಿಳಾ ಹಾಗೂ ಇತರೆ 49 ಸೇರಿ ಒಟ್ಟು 11,47,352 ಮತದಾರರು, 531 ಸೇವಾ ಮತದಾರರಿದ್ದಾರೆ. 21,362 ಯುವಕರು ಹಾಗೂ 15,671 ಯುವತಿಯರು, ಇತರೆ 3, ಒಟ್ಟು 37,036 ಯುವ ಮತದಾರರು ನೋಂದಣಿಯಾಗಿದ್ದಾರೆ.
ಇವರಿಗೆಲ್ಲ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. 8,237 ಪುರುಷ, 5,634 ಮಹಿಳೆ ಒಟ್ಟು 13,871 ವಿಕಲಚೇತನ ಮತದಾರರಿದ್ದಾರೆ. ಕರಡು ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಡಿ.9ವರೆಗೆ ಸಲ್ಲಿಸಬಹುದು. ಮತದಾರರ ಜಾಗೃತಿಗಾಗಿ ಡಿ.2 ಮತ್ತು 3ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು.
2024 ಜನೆವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಸರು ಸೇರ್ಪಡೆ, ತೆಗೆಯುವಿಕೆ, ತಿದ್ದುಪಡಿ, ವರ್ಗಾವಣೆಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ. ವಿಶೇಷ ಅಭಿಯಾನದಂದು ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆಯಲ್ಲಿ ಹಾಜರಿದ್ದು ಅರ್ಜಿ ಸ್ವೀಕರಿಸುವರು. ಠಿಠಿ://ಟಠಿಛ್ಟಿ.ಛ್ಚಿಜಿ.ಜಟ.ಜ್ಞಿ/ ಮೂಲಕವೂ ಆನ್‌ಲೈನ್ ಅರ್ಜಿ ಸಲ್ಲಿಸಬಹುದುದೆಂದು ಹೇಳಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜುಗಳಲ್ಲಿ ಮತದಾನ ಕುರಿತು ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಭಾಷಣ ಸೇರಿ ಇತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಇದ್ದರು.