ಒಳ ಮೀಸಲಾತಿ ಜಾರಿಯಾಗಲಿ

koppal dc naleen athul reservation issue protest
Published on

ಕೊಪ್ಪಳ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲು ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ದಲಿತ ಸಮುದಾಯ ಈಗಲೂ ಹಿಂದುಳಿದಿದೆ. ಒಳ ಮೀಸಲಾತಿ ಜಾರಿಯಿಂದ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಲಿದೆ. ಒಳ ಮೀಸಲು ಜಾರಿ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಹೀಗಿದ್ದರೂ ಜಾರಿಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್​ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲು ಜಾರಿ ಮಾಡುವ ಭರವಸೆ ನೀಡಿದೆ. ಸುಪ್ರೀಂ ತೀರ್ಪು ಬಂದು ಇಷ್ಟು ದಿನಗಳಾದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ನಮ್ಮ ತಾಳ್ಮೆ ಪರೀೆ ಮಾಡಬೇಡಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಪಜಾತಿಗಳು ಸಾಮಾಜಿಕವಾಗಿ ಒಂದೇ ತರನಾಗಿಲ್ಲ ಎಂಬುದಾಗಿ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ಅದರಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಹಲವು ದಶಕಗಳ ನಮ್ಮ ಹೋರಾಟ ಪರಿಗಣಿಸಬೆಕು. ತಕ್ಷಣವೇ ಒಳ ಮೀಸಲು ಜಾರಿಗೊಳಿಸಿ. ಅಲ್ಲಿವರೆಗೆ ಎಲ್ಲ ನೇಮಕಾತಿಗಳನ್ನು ನಿಲ್ಲಿಸಲಿ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳಲಿ. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ತಿಳಿಸಿದರು.

ಪ್ರತಿಭಟನೆ ಬಳಿಕ ಡಿಸಿ ನಲಿನ್​ ಅತುಲ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಖಿಲ ಭಾರತ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಡಿ. ಹುಲ್ಲೇಶ ಬೂದಗುಂಪ, ರಾಜ್ಯ ಸಂಘಟನಾ ಸಂಂಚಾಲಕ ಬಿ. ಹುಸೇನಪ್ಪ ಸ್ವಾಮಿ ಮಾದಿಗ, ಪ್ರಮುಖರಾದ ಹುಲುಗಪ್ಪ ಹಿರೇಮನಿ ಬೇವೂರು, ಶರಣಪ್ಪ ಕನಕಗಿರಿ, ಮೈಲಾರಪ್ಪ ವಕೀಲರು, ಶಂಕರ ಸಿದ್ದಾಪುರ, ಗಂಗಾವತಿಯ ಎಸ್​. ದುರಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net