

ಕೊಪ್ಪಳ: ಗೌರಿ&ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಏಕಕಾಲಕ್ಕೆ ಬಂದಿವೆ. ಎಲ್ಲರೂ ಸ್ನೇಹದಿಂದ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು.
ಕೊಪ್ಪಳ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಅದಕ್ಕೆ ಕಳಂಕ ಬರುವಂತೆ ಯಾರೂ ನಡೆದುಕೊಳ್ಳಬೇಡಿ. ಎಲ್ಲ ಧರ್ಮಿಯರು ಕಾನೂನು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಿ. ಹಬ್ಬಾಚರಣೆಗೆ ಸರ್ಕಾರ ರೂಪಿಸಿದ ಮಾರ್ಗಸೂಚಿ ಅನುಸರಿಸಿ. ಆಸ್ಪತ್ರೆ, ಶಾಲೆ ಸೇರಿ ಇತರ ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯಿಂದ ವರ್ತಿಸಿ. ಗಣೇಶ ಪ್ರತಿಷ್ಠಾಪನೆಗೆ ಬೇಕಾದ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ, ಧ್ವನಿ ವರ್ದಕ ಬಳಕೆ ಇತರ ಪರವಾನಗಿ ಏಕಗವಾ ಪದ್ಧತಿಯಡಿ ಪಡೆದುಕೊಳ್ಳಿ. ಶುಭಾಶಯ ಕೋರುವ ಬ್ಯಾನರ್, ಬಂಟಿಂಗ್ ಅಳವಡಿಕೆಗೆ ಸ್ಥಳಿಯಾಡಳಿತದ ಅನುಮತಿ ಪಡೆಯಿರಿ. ಮೂರ್ತಿ ವಿಸರ್ಜನೆ, ಮೆರವಣಿಗೆಯಲ್ಲಿ ಸಮಯ ಪಾಲನೆ ಕಡ್ಡಾಯ. ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗುವುದು. ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲು ಅವಕಾಶವಿಲ್ಲ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದರು.
ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಗ್ನಿ ನಂದಕ ಇಟ್ಟುಕೊಳ್ಳಿ. ಸಿಸಿಟಿವಿ ಕ್ಯಾಮೆರಾ, ಸಾರ್ವಜನಿಕರು ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ದ್ವಾರ, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆಗೆ ಅನುಮತಿ ಪಡೆಯಿರಿ. ಪರವಾನಗಿ ಪಡೆದ ಮಾರ್ಗ ಬಿಟ್ಟು ಬೇರೆಡೆ ಮೆರವಣಿಗೆ ಮಾಡುವಂತಿಲ್ಲ. ಎಲ್ಲರೂ ಶಾಂತಿ, ಸಂಯಮದಿಂದ ವರ್ತಿಸಿ. ಕಾನೂನು ಉಲ್ಲಂಘಿಸಬೇಡಿ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶಾಂತಿ ಇದೆ. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಇದ್ದೇವೆ. ಎಲ್ಲ ಹಬ್ಬಗಳನ್ನು ಹಿಂದು&ಮುಸ್ಲಿಮರು ಒಗ್ಗೂಡಿ ಆಚರಿಸುತ್ತಿದ್ದೇವೆ. ಎರಡೂ ಹಬ್ಬಗಳನ್ನು ಶಾಂತಿ ಹಾಗೂ ಸಡಗರದಿಂದ ಆಚರಿಸುತ್ತೇವೆ ಎಂದು ತಿಳಿಸಿದರು.
ಮುಖಂಡ ಮರಿಯಪ್ಪ ಹಬ್ಬದಂದು ಮದ್ಯ ಮಾರಾಟ ನಿಷೇಧ ಕಟ್ಟುನಿಟ್ಟಾಗಿರಲಿ ಎಂದರೆ, ನಾಸೀರ ಹುಸೇನಿ, ರಾಜಶೇಖರ ಆಡೂರ, ಗಂಗಾವತಿಯ ಶಾಮೀದ್ ಮನಿಯಾರ ಹಲವು ಸಲಹೆ ನೀಡಿದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್ ಕುಮಾರ್, ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಇತರ ಅಧಿಕಾರಿಗಳಿದ್ದರು.