ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಗಿರಲಿ, ಡಿಸಿ ನಲಿನ್​ ಅತುಲ್​ ಸೂಚನೆ

SAVE_20241018_214040
Published on

ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ನ.1ರಂದು ನಡೆವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅಂದು ಬೆಳಗ್ಗೆ 7 ಗಂಟೆಗೆ ಕೊಪ್ಪಳ ತಹಸೀಲ್ದಾರ್​ ಕಚೇರಿಯಲ್ಲಿ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಬಳಿಕ ಅಶೋಕ ವೃತ್ತ, ಕೇಂದ್ರ ಬಸ್​ ನಿಲ್ದಾಣ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣವರೆಗೆ ಕಲಾ ತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಭಾಗವಹಿಸಿ. ವೇದಿಕೆ, ಸಾಂಸತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿರಲಿ. ವಿವಿಧ ಸಮಿತಿಗಳು ನಿಮಗೆ ವಹಿಸಿದ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ಸೂಚಿಸಿದರು.

ಕೊಪ್ಪಳ ನಗರದ ಪ್ರಮುಖ ರಸ್ತೆಗಳು, ವೃತ್ತಗಳನ್ನು ಸ್ವಚ್ಛಗೊಳಿಸಿ. ಕ್ರೀಡಾಂಗಣದಲ್ಲಿ ಕುಡಿವ ನೀರಿರುವಂತೆ ನೋಡಿಕೊಳ್ಳಿ. ತುರ್ತು ಆರೋಗ್ಯ ಸೇವೆಗೆ ಆ್ಯಂಬುಲೆನ್ಸ್​, ಅಗ್ನಿಶಾಮಕ ಹಾಗೂ ವೈದ್ಯಕಿಯ ಸಿಬ್ಬಂದಿ ನಿಯೋಜಿಸಿ. ಸಾಂಸತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಗೀತೆಗಳಿಗೆ ಮಾತ್ರ ಅವಕಾಶ. ಜಿಲ್ಲಾ ಉಸ್ತುವಾರಿ ಸಚಿವರ ಭಾಷಣಕ್ಕೆ ಆಯಾ ಇಲಾಖೆ ಪ್ರಗತಿ ವರದಿ ಸಲ್ಲಿಸಿ ಎಂದು ನಿರ್ದೇಶಿಸಿದರು.

ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಕನ್ನಡ ರಾಜ್ಯೋತ್ಸವ ವ್ಯವಸ್ಥಿತ ಆಚರಣೆಗೆ ರಚನೆಗೊಂಡ ಸಮಿತಿಗಳು ನಿಮ್ಮ ಕಾರ್ಯ ಅವಧಿಯೊಳಗೆ ಮುಗಿಸಿ. ಮಕ್ಕಳನ್ನು ಕರೆತರಲು ಸಾರಿಗೆ ಬಸ್​ ಒದಗಿಸಿ. ಪಥಸಂಚಲನ ಮತ್ತು ಅದರ ಪೂರ್ವ ತರಬೇತಿಗೆ ಪಾಲ್ಗೊಳ್ಳುವ ಮಕ್ಕಳಿಗೆ ಹಾಲು ಅಥವಾ ಲಘು ಉಪಾಹಾರ ವಿತರಣೆಗೆ ಕ್ರಮ ಕೈಗೊಳ್ಳಿ. ಶಾಲಾ ಮ್ಕಕಳ ಸಾಮೂಹಿಕ ನೃತ್ಯ, ಸಾಧಕರಿಗೆ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಮಿತಿಗೆ ಅ.25ರೊಳಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಮಂಜುನಾಥ ಗೊಂಡಬಾಳ ನಾಡು&ನುಡಿ, ನೆಲ&ಜಲಕ್ಕಾಗಿ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವದಂದು ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದರಂತೆ ಕೊಪ್ಪಳದಲ್ಲೂ ಮುಂದುವರೆಸುವಂತೆ ಮನವಿ ಮಾಡಿದರು.


ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಡಿಡಿಪಿಯು ಜಗದೀಶ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಹಳ್ಳಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net