

ಕೊಪ್ಪಳ: ಮಕ್ಕಳ ರೋಗಗಳು, ಕುಂಠಿತ ಬೆಳವಣಿಗೆ ಬಗ್ಗೆ ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಿಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಗು, ತಾಯಿ ಮರಣ ಪ್ರಮಾಣ ಕಡಿಮೆ ಮಾಡಬೇಕಿದೆ. ಹುಟ್ಟುವ ಪ್ರತಿ 100 ಮಕ್ಕಳಲ್ಲಿ 6&7ರಲ್ಲಿ ಜನ್ಮ ನೂನ್ಯತೆ, ಶೇ.10ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಇದೆ. ಪೌಷ್ಟಿಕ ಆಹಾರ ಕೊರತೆ, ವಿವಿಧ ಕಾಯಿಲೆಗಳಿಂದ ಮರಣ ಸಂಭವಿಸುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ರಾಷ್ಟ್ರೀಯ ಬಾಲ ಸ್ವಾಸ್ಥ$್ಯ ಕಾರ್ಯಕ್ರಮ ಆರಂಭವಾಗಿದೆ. ತಪಾಸಣೆ, ಚಿಕಿತ್ಸೆಗಾಗಿ ವೈದ್ಯಕಿಯ ಶಾಲಾ ಆರೋಗ್ಯ ತಂಡ ರಚಿಸಲಾಗಿದೆ. ತಂಡಗಳು ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಕಡ್ಡಾಯವಾಗಿ ವೈದ್ಯಕಿಯ ತಪಾಸಣೆ ನಡೆಸಿ. 0&6 ತಿಂಗಳ ಮಕ್ಕಳಲ್ಲಿ ನೂನ್ಯತೆಗಳು ಕಂಡುಬಂದಲ್ಲಿ ತಕ್ಷಣ ಆಶಾ ಕಾರ್ಯಕರ್ತೆಯರ ಮೂಲಕ ಆಸ್ಪತ್ರೆಗೆ ದಾಖಲಿಸಿ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ತಿಳಿಸಿದರು.
ಡಿಎಚ್ಒ ಡಾ.ಟಿ.ಲಿಂಗರಾಜು ಮಾತನಾಡಿ, ಆಜನ್ಮ ನ್ಯೂನ್ಯತೆಯಲ್ಲಿ ನರದೋಷ, ಡೌನ್ ಸಿಂಡ್ರೋಮ್, ಸೀಳು ತುಟಿ, ವಕ್ರಪಾಸ, ಜನ್ಮಜಾತ ಕಣ್ಣಿನ ಪೊರೆ, ಕಿವುಡು, ಹೃದಯ ಕಾಯಿಲೆ ಸಮಸ್ಯೆಗಳು ಒಳಗೊಂಡಿದೆ. ಕುಂಠಿತ ಬೆಳವಣಿಗೆಯಲ್ಲಿ ದೃಷ್ಟಿ, ಶ್ರವಣ, ಜ್ಞಾನ ಗ್ರಹಣ, ಭಾಷೆ ನಡವಳಿಕೆ, ಕಲಿಕೆ ಇತ್ಯಾದಿ ದೋಷ ಬರುತ್ತವೆ. ಪೌಷ್ಠಿಕಾಂಶ ಕೊರತೆಯಿಂದ ಅಪೌಷ್ಠಿಕತೆ, ಎ ಮತ್ತು ಡಿ ಅನ್ನಾಂಗ ಕೊರತೆಯಿಂದ ದೃಷ್ಟಿ ಹೀನತೆ, ಚರ್ಮಕ್ಕೆ ಸಂಬಂಧಿಸಿದ ತೊಂದರೆ, ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರಬಹುದು. ಮಕ್ಕಳಲ್ಲಿ ಕಿವಿ ಸೋರುವುದು, ಹಲ್ಲಿನ ಸಮಸ್ಯೆ, ಸಾಮಾನ್ಯ ಜ್ವರ, ಶ್ವಾಸಕೋಶ ಸೋಂಕು, ಚರ್ಮ ಕಾಯಿಲೆ ಮುಂತಾದ ಸಮಸ್ಯೆ ಕಾಣಿಸಿಕೊಂಡರೆ ತಪಾಸಣೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ, ರೆಫರಲ್ ಹಾಗೂ ಅನುಸರಣೆ ಉಚಿತವಾಗಿ ಒದಗಿಸಲಾಗುತ್ತದೆ ಎಂದರು.
ಆರ್ಸಿಎಚ್ ಅಧಿಕಾರಿ ಡಾ.ಪ್ರಕಾಶ, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಕುಷ್ಠರೋಗ ನಿಮೂರ್ಲನಾಧಿಕಾರಿ ಡಾ.ಪ್ರಕಾಶ ಎಚ್., ಡಾ.ಶಶಿಧರ ಎ. ಇತರರಿದ್ದರು.