ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಎಲ್ಲರೂ ಭಾಗಿಯಾಗಿ

koppal dc naleen athul international democracy day celebration
Published on

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅವಶ್ಯ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದರು.

ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಗವಾಗಿ ನಗರದ ಜಿಪಂ ಜೆಎಚ್​ ಪಟೇಲ್​ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸೆ.15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ವಿಶೇಷವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಬೃಹತ್​ ಮಾನವ ಸರಪಳಿ ರಚಿಸಿ ವಿಶ್ವ ದಾಖಲೆ ಮಾಡುವ ಯೋಜನೆ ಇದೆ. ಜಿಲ್ಲೆಯಲ್ಲೂ ಈ ಬಗ್ಗೆ ಸಿದ್ಧತೆಗಳು ನಡೆದಿವೆ. ಗ್ಯಾರಂಟಿ ಯೋಜನೆಗಳ ಲಾನುಭವಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಿ. ಜನಪ್ರತಿನಿಧಿಗಳು, ಎನ್​ಜಿಒ, ಸಂ&ಸಂಸ್ಥೆಗಳು, ಸಹಕಾರ ಸಂಗಳು ಪಾಲ್ಗೊಳ್ಳುವುದು ಅವಶ್ಯ ಎಂದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಕಳೆದ ಬಾರಿ ಸಂವಿಧಾನ ಜಾಥಾ ಯಶಸ್ವಿಯಾಗಿ ನಡೆಸಿದ್ದು, ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಈ ವರ್ಷವೂ ಸಮರ್ಪಕ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ. ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದಿಂದ ಮುನಿರಾಬಾದ್​ ರಾಷ್ಟ್ರೀಯ ಹೆದ್ದಾರಿವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. 53 ಕಿ.ಮೀ. ಉದ್ದದ ಸರಪಳಿಗೆ 54 ಸಾವಿರ ಜನರು ಬೇಕು. 80&85 ಸಾವಿರ ಜನರನ್ನು ಸೇರಿಸುವ ಗುರಿ ಹಾಕಿಕೊಂಡಿದ್ದೇವೆ. ಆರೋಗ್ಯ, ತುರ್ತು ಕರ್ತವ್ಯ ನಿರತರನ್ನು ಹೊರತಿಪಡಿಸಿ ಎಲ್ಲ ಇಲಾಖೆ ನೌಕರರು ಭಾಗಿಯಾಗಿ. ಸಾಮಾಜಿಕ ಜಾಲತಾಣ, ಗ್ರಾಮಗಳಲ್ಲಿ ಡಂಗೂರ ಸಾರಿಸಿ ಹೆಚ್ಚಿನ ಜನ ಸೇರುವಂತೆ ಮಾಡಿ. ನೋಂದಣಿ ಮಾಡಿಕೊಂಡು ಭಾಗವಹಿಸುವ ಪ್ರತಿಯೊಬ್ಬರಿಗೂ ಆನ್​ಲೈನ್​ ಸರ್ಟಿಫಿಕೇಟ್​ ಸಿಗಲಿದೆ ಎಂದರು.

ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ವಿವಿಧ ಗ್ರಾಪಂ ಅಧ್ಯಕ್ಷ&ಉಪಾಧ್ಯಕ್ಷರು ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್​ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net