

ಕೊಪ್ಪಳ: ಗಾಂಧಿ ಜಯಂತಿ ಅಂಗವಾಗಿ ಅ.2ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಡೆವ ಬಾಪೂಜಿ ಪ್ರಬಂಧ ಸ್ಪರ್ಧೆ ಅಚ್ಚುಕಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಶ್ರಮದಾನ, ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿ ಪ್ರಿಯ ಭಜನೆಗಳು, ಅಸ್ಪ-----ೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿ ವಸ್ತು ಬಳಕೆ ಇನ್ನಿತರ ವಿಷಯ ಕುರಿತು ಕಾರ್ಯಕ್ರಮ ರೂಪಿಸಿ. ಬಾಪೂಜಿ ಬದುಕು, ಸ್ವಾತಂತ್ರ್ಯ ಚಳವಳಿ, ಅಹಿಂಸೆ, ಸಹಬಾಳ್ವೆ ಇನ್ನಿತರ ವಿಷಯ ಕುರಿತು ಪ್ರೌಢ ಶಾಲೆ, ಪಿಯು, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಬಂಧ ನಡೆಸಿ. ಶ್ರಮದಾನ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು, ವಿದ್ಯಾರ್ಥಿಗಳು, ಸಂ&ಸಂಸ್ಥೆಯವರು ಭಾಗಿಯಾಗುವಂತೆ ನೋಡಿಕೊಳ್ಳಿ. ಸ್ವದೇಶಿ ವಸ್ತು ಬಳಕೆ ಸಂಕೇತವಾಗಿ ಅ.2ರಂದು ಅಧಿಕಾರಿಗಳು ಖಾದಿ ಬಟ್ಟೆ ಧರಿಸಿ. ಪ್ರತಿಜ್ಞಾ ವಿಧಿ ಬೋಧನೆ, ಜಾಗೃತಿ ಜಾಥಾ ಆಯೋಜಿಸಿ. ಮದ್ಯಪಾನ ನಿಷೇಧ ಅಂಗವಾಗಿ ಗ್ರಾಮವೊಂದರಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸುವಂತೆ ಸಲಹೆ ನೀಡಿದರು.
ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಎಲ್ಲ ಅಧಿಕಾರಿಗಳು ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ. ನಿಗದಿಯಂತೆ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ಶಿಸ್ತು, ಶಿಷ್ಠಾಚಾರ ಪಾಲಿಸುವಂತೆ ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಜಯಂತಿ ಅಂಗವಾಗಿ ಕಳೆದೊಂದು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳ ಸಿದ್ಧತೆ ನಡೆದಿದೆ. ಪ್ರಬಂಧ ಸ್ಪರ್ಧೆ ನಡೆಸಲಾಗಿದೆ. ವಿಜೇತರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಿರೇಗೌಡರ, ರೇಷ್ಮೇ ಇಲಾಖೆ ಡಿಡಿ ಎಸ್.ಸುಂದರರಾಜ್, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸುರೇಶ ಕೋಕರೆ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ವಾಲ್ಮೀಕಿ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಎಂ.ಎಸ್.ದೊಡ್ಮನಿ ಇತರರಿದ್ದರು.