

ಕೊಪ್ಪಳ: ಜಿಲ್ಲೆಯ ಸರ್ಕಾರಿ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಪಠ್ಯ ಹಾಗೂ ಇತರ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಎನ್ಇಪಿ&ಎಸ್ಇಪಿ ಕುರಿತು ತುಲನಾತ್ಮಕ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೆಗಾ ಮ್ಯಾಕ್ರೋ ಯೋಜನೆಯಡಿ 1.5 ಕೋಟಿ ರೂ. ಮೊತ್ತದಲ್ಲಿ ಪುಸ್ತಕ ಖರೀದಿಗೆ ಟೆಂಡರ್ ಕರೆಯಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಅನುಸಾರ ಪುಸ್ತಕ ಖರೀದಿಗೆ ಟೆಂಡರ್ ಕರೆಯಲಾಗಿದೆ. 2024&25ನೇ ಶೈಕ್ಷಣಿಕ ಸಾಲಿಗೆ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಹೀಗಾಗಿ ಹೊಸ ನೀತಿ ಪಠ್ಯದಂತೆ ಪುಸ್ತಕ ಖರೀದಿಸುವಂತೆ ಲೀಡ್ ಕಾಲೇಜು ಪ್ರಾಚಾರ್ಯರು ಪತ್ರ ಬರೆದಿದ್ದರು. ಇದರಿಂದ ಖರೀದಿ ಗೊಂದಲ ಮೂಡಿಸಿದೆ. ಎನ್ಇಪಿಯಂತೆ ಪುಸ್ತಕ ಖರೀದಿಸಿದಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಿಲ್ಲವೆನ್ನಲಾಗಿದೆ.
ಎನ್ಇಪಿ ಹಾಗೂ ಎಸ್ಇಪಿ ಪಠ್ಯದ ನಡುವಿನ ವ್ಯತ್ಯಾಸವೇನು ? ಬದಲಾವಣೆ ಅಗತ್ಯತೆ ಕುರಿತು ತುಲನಾತ್ಮಕ ವರದಿ ಸಲ್ಲಿಸುವಂತೆ ಡಿಸಿ ಪ್ರಾಚಾರ್ಯರಿಗೆ ಸೂಚಿಸಿದ್ದಾರೆ. ಈ ಸಂಬಂಧ ವೈಜ್ಞಾನಿಕ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ವರದಿ ಪಡೆದು ಟೆಂಡರ್ ಬದಲಾವಣೆ ಮಾಡುವ ಅಗತ್ಯತೆ ಕಂಡುಬಂದಲ್ಲಿ ರದ್ದುಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ಯೋಜಿಸಿದೆ. ಪಠ್ಯ ಪುಸ್ತಕ ಖರೀದಿಯಲ್ಲಿನ ಗೊಂದಲ ಕುರಿತು ವಿಜಯವಾಣಿ ಸೆ.3ರಂದು "ಪಠ್ಯಪುಸ್ತಕ ಖರೀದಿ ಗೊಂದಲ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.