

ಕೊಪ್ಪಳ: ಜಿಲ್ಲೆಯ ಸರ್ಕಾರಿ ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಪಠ್ಯ ಪುಸ್ತಕ ಪೂರೈಕೆಗೆ ಕರೆದಿದ್ದ ಟೆಂಡರ್ ಜಿಲ್ಲಾಡಳಿತ ರದ್ದುಗೊಳಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿತ ಮೆಗಾ ಮ್ಯಾಕ್ರೋ ಯೋಜನೆ ಅಡಿ ಜಿಲ್ಲೆಗೆ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ 15 ಪದವಿ, ಎರಡು ಇಂಜಿನಿಯರಿಂಗ್ ಹಾಗೂ ನಾಲ್ಕು ಡಿಪ್ಲೋಮಾ ಕಾಲೇಜುಗಳಿಗೆ ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀೆ ಪುಸ್ತಕ ಖರೀದಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಸಮಿತಿ ರಚಿಸಿದ್ದು, ನೂತನ ಶಿಕ್ಷಣ ನೀತಿ (ಎನ್ಇಪಿ) ಪಠ್ಯ ಕ್ರಮ ಅನ್ವಯ ಟೆಂಡರ್ ಕರೆಯಲಾಗಿತ್ತು. 2024-25ನೇ ಸಾಲಿಗೆ ರಾಜ್ಯ ಸರ್ಕಾರ ಎನ್ಇಪಿ ವಾಸಪ್ ಪಡೆದಿದೆ. ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಜಾರಿ ಮಾಡಿದೆ. ಪಠ್ಯ ಕ್ರಮದಲ್ಲಿ ವ್ಯತ್ಯಾಸವಿದ್ದು, ಎನ್ಇಪಿ ಪುಸ್ತಕ ಖರೀದಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ.
ಈ ಬಗ್ಗೆ ಜಿಲ್ಲಾ ಲೀಡ್ ಕಾಲೇಜು ಪ್ರಾಚಾರ್ಯರು ಸಮಿತಿಗೆ ಪತ್ರ ಬರೆದು ಮನವಿ ಮಾಡಿದ್ದರು. ಹೀಗಿದ್ದರೂ ಸಮಿತಿ ಟೆಂಡರ್ ರದ್ದಿಗೆ ಸಿದ್ಧವಿರಲಿಲ್ಲ. ಈ ಬಗ್ಗೆ ವಿಜಯವಾಣಿ ಸೆ.3ರಂದು "ಪಠ್ಯ ಪುಸ್ತಕ ಖರೀದಿ ಗೊಂದಲ' ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಜಿಲ್ಲಾಧಿಕಾರಿ ನಲಿನ್ ಅತುಲ್, ಸಮಿತಿಗೆ ಎನ್ಇಪಿ, ಎಸ್ಇಪಿ ಪಠ್ಯದ ನಡುವಿನ ತುಲನಾತ್ಮಕ ವರದಿ ಕೇಳಿದ್ದರು. ಅದರಂತೆ ಸಮಿತಿ ವರದಿ ಸಲ್ಲಿಸಿದೆ. ವರದಿ ಪರಿಶೀಲಿಸಿದ ಡಿಸಿ, ಪಠ್ಯಕ್ರಮದಲ್ಲಿ ವ್ಯತ್ಯಾಸ ಇರುವುದನ್ನ ಮನಗಂಡಿದ್ದಾರೆ. ಕೂಡಲೇ ಟೆಂಡರ್ ರದ್ದುಪಡಿಸುವಂತೆ ಸೂಚಿಸಿದ್ದಾರೆ. ಸದ್ಯ ಟೆಂಡರ್ ರದ್ದುಗೊಂಡಿದ್ದು, ಈಗಿರುವ ಪಠ್ಯ ಕ್ರಮದಂತೆ ಹೊಸದಾಗಿ ಟೆಂಡರ್ ಕರೆಯಲು ಸಮಿತಿ ನಿರ್ಧರಿಸಿದೆ.