

ಕೊಪ್ಪಳ:ಪ್ರಧಾನ ಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದಡಿ ಎಲ್ಲ ಇಲಾಖೆಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಲಾಭ ಒದಗಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾಗ್ಯಲಕ್ಷ್ಮೀ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು, ಸ್ವ ಉದ್ಯೋಗ, ಶ್ರಮ ಶಕ್ತಿ ಹಾಗೂ ಮುಂತಾದ ಯೋಜನೆಗಳಲ್ಲಿ ಅರ್ಹರನ್ನು ಗುರುತಿಸಿ. ಯೋಜನೆ ಕುರಿತು ಅವರಿಗೆ ತಿಳಿವಳಿಕೆ ಮೂಡಿಸಿ.
ಅರ್ಹರಿಗೆ ಯೋಜನೆ ತಲುಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಷ್ಯವೇತನ, ತಾಂತ್ರಿಕ, ವೈದ್ಯಕೀಯ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಒದಗಿಸಿ. ಆಯಾ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನವನ್ನು ಅವಧಿಯೊಳಗೆ ಖರ್ಚು ಮಾಡುವಂತೆ ನಿರ್ದೇಶಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುವ ಸ್ವ ಉದ್ಯೋಗ, ಶ್ರಮ ಶಕ್ತಿ ಮುಂತಾದ ಸ್ವಾವಲಂಬಿ ಯೋಜನೆ ಹಾಗೂ ಕೌಶಲ ಆಧಾರಿತ ಕಾರ್ಯಕ್ರಮಗಳನ್ನು ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅನುಷ್ಠಾನ ಮಾಡಿ.
ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ಇಲಾಖೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಇರುವ ಯೋಜನೆ/ಕಾರ್ಯಕ್ರಮಗಳ ಬಗ್ಗೆ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸೂಕ್ತ ಮೇಲ್ವಿಚಾರಣೆ ನಡೆಸಿ. ಬ್ಯಾಂಕ ಸಾಲ ಸಂಬಂಧ ಲೀಡ್ ಬ್ಯಾಂಕ್‌ನೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಇತರರಿದ್ದರು.