

ಕೊಪ್ಪಳ:ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿ ಕೊಡಿ. ಇದರಿಂದ ಅವರು ಉತ್ತಮ ಪ್ರದರ್ಶನ ತೋರಲು ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣ ಸಭಾಂಗಣದಲ್ಲಿ ಕ್ರೀಡಾಂಗಣ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲಾ ಕ್ರೀಡಾಂಗಣ 18 ಎಕರೆ ವಿಸ್ತೀರ್ಣ ಹೊಂದಿದೆ. 400 ಮೀ.ಅಥ್ಲೇಟಿಕ್ ಮಡ್ ಟ್ರಾೃಕ್, ತಾತ್ಕಾಲಿಕ ವಾಲಿಬಾಲ್, ಬಾಸ್ಕೆಟ್ ಬಾಲ್, ಗ್ಯಾಲರಿ, ಒಳಾಂಗಣ ಕ್ರೀಡಾಂಗಣ, ವ್ಯಾಯಾಮ ಶಾಲೆ ನಿರ್ಮಿಸಿ. ವಿದ್ಯುತ್ ದೀಪ ಅಳವಡಿಕೆ ಹಾಗೂ ಇತರ ಮೂಲ ಸೌಕರ್ಯ ಕಲ್ಪಿಸಿ.
ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ತೋರಿದ್ದಾರೆ. ಅವರಿಗೆ ನಿತ್ಯ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಿ. ಕ್ರೀಡಾ ವಸತಿ ನಿಲಯದ ಬಾಲಕ, ಬಾಲಕಿಯರೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ವಿವಿಧ ಕ್ರೀಡೆಗೆ ಒಬ್ಬೊಬ್ಬ ತರಬೇತುದಾರರನ್ನು ನೇಮಿಸಿ. ಪ್ರೇಕ್ಷಕರ ಗ್ಯಾಲರಿಗೆ ಚಾವಣಿ ಅವಶ್ಯವಿದ್ದು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ. ಖಾಲಿ ಸ್ಥಳವನ್ನು ದಾಸ್ತಾನು, ತರಬೇತಿ ಶಿಬಿರಗಳಿಗೆ ತಂಗಲು ವ್ಯವಸ್ಥೆ ಮಾಡಿ.
ವಿವಿಧ ಸಂಸ್ಥೆಗಳಿಂದ ನಡೆಸುವ ತರಬೇತಿ ಶಿಬಿರಗಳ ಬಳಕೆಗೆ ಒದಗಿಸಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ. ಒಳಾಂಗಣ ಕ್ರೀಡಾಂಗಣಗಳನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಉಪಯೋಗಿಸಲು ಅನುವು ಮಾಡಿಕೊಡುವಂತೆ ತಿಳಿಸಿದರು.
ಜಿಮ್ ಇನಸ್ಪೆಕ್ಟರ್ ನೇಮಿಸಿ: ವ್ಯಾಯಾಮ ಶಾಲೆಗೆ ಒಬ್ಬಜಿಮ್ ಇನಸ್ಪೆಕ್ಟರ್ ನೇಮಿಸಿ. ಈಜುಕೊಳ ಚಾವಣಿ, ಎಲೆಕ್ಟ್ರಿಕ್ ದುರಸ್ಥಿತಿ ಮಾಡಿಸಿ. ಪ್ಲೋರಾಯ್ಡೋ ನೀರಿನ ಬದಲು, ನಗರಸಭೆಯಿಂದ ಸಿಹಿ ನೀರು ಪಡೆಯಿರಿ.
ಕ್ರೀಡಾಂಗಣದ ಮೊದಲನೇ ಮಹಡಿಯಲ್ಲಿ ಸಭಾಂಗಣ, ಪ್ರಥಮ ಚಿಕಿತ್ಸೆ ಕೊಠಡಿ, ದಾಸ್ತಾನು ಕೊಠಡಿ, ಬಾಲಕ ಬಾಲಕಿಯರ ಶೌಚಗೃಹ, ಚೆಸ್ ರೂಮ್ ಇರಲಿ. ತಾಲೂಕು ಕ್ರೀಡಾಂಗಣದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಅಂದಾಜು ವೆಚ್ಚ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ವರದಿ ತಯಾರಿಸುವಂತೆ ನಿರ್ದೇಶಿಸಿದರು.
ಜಿಪಂ ಸಿಒ ರಾಹುಲ್ ರತ್ನಂ ಪಾಂಡೆಯ, ಡಿಯುಡಿಸಿ ಪಿಡಿ ಕಾವ್ಯಾರಾಣಿ, ಕ್ರೀಡಾ ಇಲಾಖೆ ಎಡಿ ವಿಠ್ಠಲ ಜಾಬಗೌಡರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ನಗರಸಭೆ ಅಭಿಯಂತರ ಸೋಮಲಿಂಗಪ್ಪ ಇತರರಿದ್ದರು.