

ಕೊಪ್ಪಳ: ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳಿಲ್ಲದ ಕಲೆ ಸಾರ್ಥಕ ಆಗುವುದಿಲ್ಲ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ವಿಶ್ವ ವಿದ್ಯಾಲಯದಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಸರಾ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಕವಿ ಬರೆಯುವುದು ವೈಯಕ್ತಿಕ ತೆವಲಿಗಲ್ಲ. ಜಗತ್ತಿನ ಶಾಂತಿ ಆಶಿಸುವುದಕ್ಕೆ. ಮನುಷ್ಯತ್ವಕ್ಕಾಗಿ. ಜಗತ್ತಿಗೆ ಕವಿತೆಗಳು ಬಹು ಮುಖ್ಯ. ಕವಿತೆ ಇಲ್ಲದಿದ್ದರೆ ಮನುಷ್ಯ ಮನುಷ್ಯನಾಗಿ ಉಳಿಯುವುದಿಲ್ಲ. ಆ ಕಾಲದ ಸಂವೇದನಕ್ಕೆ ಸ್ಪಂದಿಸಿ ಬರೆಯದೇ ಹೊದರೆ ನಾವು ಅರ್ಥಹೀನರಾಗುತ್ತೇವೆ. ಅಕ್ಷರ ಕಲಿತವರಷ್ಟೇ ಕವಿಗಳಲ್ಲ. ಜನಪದರು ಕಟ್ಟಿದ ಕವತೆಗಳು ಇಂದಿಗೂ ಪ್ರಸ್ತುತ. ಕವಿತೆಗಳಲ್ಲಿ ಬದುಕಿನ ಅರ್ಥ, ಅನ್ವೇಷಣೆ, ಅನುಭವ, ಅನುಭಾವಿಕತೆ ಇರುತ್ತದೆ. ನೋಡಲು ಸರಳವಾಗಿದ್ದರೂ ಸರಳತ್ವದೊಳಗೆ ಅಸಮಾನ್ಯ ದರ್ಶನ ಮೂಡಿಸುತ್ತದೆ. ಕಾವ್ಯಕ್ಕೆ ಸಾವಿಲ್ಲ. ದಸರಾ ಕವಿಗೋಷ್ಠಿ ವಿಜಯ, ಹಿಂಸೆಯ ಸಂಕೇತವಲ್ಲ. ಶಾಂತಿ ಸಂಕೇತ. ಜಗತ್ತಿನಲ್ಲಿ ಸತ್ಯ ನುಡಿದವರು ಸೆರೆಮನೆಗೆ ಹೋಗಿದ್ದಾರೆ. ಯುವ ಕವಿಗಳು ವಿಶ್ವ ಮಾನವ ಸಂದೇಶ ಸಾರುವಂತಾಗಲಿ. ಯುವ ಮನಸ್ಸುಗಳನ್ನು ಮನುಷ್ಯತ್ವದ ಕಡೆಗೆ ಕೊಂಡೊಯ್ಯುವಂತಾಗಲಿ ಎಂದು ಆಶಿಸಿದರು.
ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ಕಲ್ಯಾಣ ಕರ್ನಾಟಕದ ಸಾಂಸತಿಕ ಹಿರಿಮೆ ಪರಿಚಯಿಸುವ ಕೆಲಸವಾಗುತ್ತಿಲ್ಲ. ಈ ಭಾಗ ಆಳವಾದ ಸಾಂಸತಿ ಅಡಗಿಸಿಟ್ಟುಕೊಂಡಿದೆ. ಈ ಬಗ್ಗೆ ಹೆಚ್ಚು ಪರಿಚಯಿಸಬೇಕಿದೆ. ಹೆಚ್ಚು ಹೆಚ್ಚು ಸಾಂಸತಿಕ ಉತ್ಸವ ಆಯೋಜಿಸುವ ಕೆಲಸವಾಗಲಿ. ಕಲ್ಪನಾ ಶಕ್ತಿ ಇರದಿದ್ದಲ್ಲಿ ಕವಿ ಆಗಲು ಸಾಧ್ಯ ಆಗಲಿಕ್ಕಿಲ್ಲ. ಕವಿತೆ, ಕಾವ್ಯ ಎಂಬುದು ಶಾಂತಿಯುತವಾಗಿ ನಡೆವ ಹೋರಾಟ. ಇಂದಿನ ಸಿನಿಮಾಗಳು ಸಾರ್ವಜನಿಕ ಜೀವನ ಹಾಳುಮಾಡುತ್ತಿವೆ. ಪುಸ್ತಕ ಓದುಗರ ಸಂಖ್ಯೆ ಕಡಿಮೆ ಆಗಿದೆ. ಮೌಲ್ಯಗಳನ್ನು ಒಳಗೊಂಡ ಸಿನಿಮಾಗಳು ಇಂದು ಬರುತ್ತಿಲ್ಲ. ಸಾಹಿತ್ಯ ಸಮಾಜದ ಆಸ್ತಿ. ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಈ ಭಾಗದಲ್ಲಿ ಸಾಂಸತಿಕ ಉತ್ಸವ ಮಾಡುವ ಆಶಯವಿತ್ತು. ಅದಕ್ಕೆ ಪೂರಕವಾಗಿ ಹಲವರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅನುದಾನ ಕೊರತೆ ನಡುವೆಯೂ ಯಶಸ್ವಿಯಾಗಿ ವಿವಿ ನಡೆಸಲಾಗುತ್ತಿದೆ. ಇನ್ನ ಹಲವು ಕೋರ್ಸ್ ಆರಂಭಿಸಲಾಗುವುದೆಂದರು.
ಬಳ್ಳಾರಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಕುಲ ಸಚಿವ ಎಸ್.ಎನ್.ರುದ್ರೇಶ, ಕಲಬುರ್ಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಮಾತನಾಡಿದರು. ಕೊಪ್ಪಳ ವಿವಿ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ, ಹಣಕಾಸು ಅಧಿಕಾರಿ ಅಮಿನ್ ಅತ್ತಾರ, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸೇರಿ ಇತರರಿದ್ದರು. 60ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.