

ಕೊಪ್ಪಳ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಟಿಎಚ್‌ಒ ರಾಮಾಂಜನೇಯ ಹೇಳಿದರು.
ತಾಲೂಕಿನ ಹೊಸಬಂಡಿ ಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರೂ ಮಾಸ್ಕ್ ಧರಿಸುವುದರ ಜತೆಗೆ ಅಂತರ ಕಾಯ್ದುಕೊಂಡು ಮಾತನಾಡಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈಯಕ್ತಿಕ ಜಾಗೃತಿ ಮೂಲಕ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕೆಂದು ಸಲಹೆ ನೀಡಿದರು.
ಪ್ರಾಚಾರ್ಯ ನಿಂಗಪ್ಪ ಕಂಬಳಿ ಮಾತನಾಡಿ, ಕೋವಿಡ್ ಸಂಪೂರ್ಣ ತೊಲಗುವವರೆಗೂ ಎಚ್ಚರಿಕೆಯಿಂದ ಇರುವುದು ಅವಶ್ಯ ಎಂದರು. ಫ್ಲೋರೋಸಿಸ್ ತಡೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬಸವರಾಜ ಗೊಂದಿಹೊಸಳ್ಳಿ, ಶಾಹಿನ್, ಮಂಜುನಾಥಗೆ ನಗದು ಬಹುಮಾನ ನೀಡಲಾಯಿತು.