ರಾಜೀ ಸಂಧಾನದಲ್ಲಿ ಒಂದಾದ 14 ಜೋಡಿ

koppal court adalat judge Chandrashekhar
Published on

ಕೊಪ್ಪಳ:ವಿವಿಧ ಕಾರಣಗಳಿಗೆ ವಿಚ್ಛೇಧನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ 14 ಜೋಡಿಗಳನ್ನು ಜಿಲ್ಲಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಧೀಶರು ರಾಜೀ ಸಂಧಾನ ಮೂಲಕ ಮತ್ತೆ ಒಂದುಗೂಡಿಸಿದ್ದಾರೆ.

ಕೌಟುಂಬಿಕ ಭಿನ್ನಾಭಿಪ್ರಾಯ, ಹಣಕಾಸು ಸಮಸ್ಯೆ, ಕುಡಿತ, ಸೋಮಾರಿತನ, ಅನುಮಾನ ಹೀಗೆ ಹಲವು ಕಾರಣ ನೀಡಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೊಪ್ಪಳ ನ್ಯಾಯಾಲಯದಲ್ಲಿ ಐದು, ಗಂಗಾವತಿ ಎಂಟು ಮತ್ತು ಯಲಬುರ್ಗಾ ನ್ಯಾಯಾಲಯದಲ್ಲಿ ಒಂದು ಜೋಡಿ ವಕೀಲರು ಹಾಗೂ ನ್ಯಾಯಾಧೀಶರ ಸಂಧಾನ ಬಳಿಕ ಮತ್ತೆ ಒಂದಾಗಿ ಹೊಸ ಜೀವನಕ್ಕೆ ಕಾಲಿಟ್ಟವು.

ವಿಮೆ, ನೀರಿನ ಬಿಲ್​, ಬ್ಯಾಂಕ್​ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್​ ಬೌನ್ಸ್​ ಪ್ರಕರಣಗಳು, ಜನನ ಮರಣ, ಸಿವಿಲ್​ ಕೇಸ್​, ಕ್ರಿಮಿನಲ್​ ಕೇಸ್​, ಮೋಟಾರ್​ ವಾಹನ ಅಪಘಾತ ಸೇರಿ ಒಟ್ಟು 4,182 ಪ್ರಕರಣಗಳಲ್ಲಿ 3,328 ಪ್ರಕರಣಗಳು ಸಂಧಾನ ಬಳಿಕ ಇತ್ಯರ್ಥಗೊಂಡವು. ನ್ಯಾಯಾಲಯಕ್ಕೆ ದಾಖಲಾಗದೇ ಇರುವ 35,403 ಪ್ರಕರಣಗಳ ಪೈಕಿ 32,393 ಪ್ರಕರಣಗಳನ್ನು ಪರಿಹರಿಸಲಾಯಿತು. ಒಟ್ಟು 35,721 ಪ್ರಕರಣಗಳನ್ನು ಬಗೆಹರಿಸಿದ್ದು, 57,79,60,777ರೂ. ಪರಿಹಾರ ಕೊಡಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ., ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಹಾಂತೇಶ ಎಸ್​. ದರಗದ ತಿಳಿಸಿದ್ದಾರೆ.

ಕಿನ್ನಾಳ ಯುವಕರಿಗೆ ಸನ್ಮಾನ : ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯುವಕರು ಡಿಜೆ ಹಣ ಬಳಸಿ ತಮ್ಮೂರ ರಸ್ತೆ ದುರಸ್ತಿ ಮಾಡಿದ್ದಕ್ಕೆ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಶ್ಲಾನೆ ವ್ಯಕ್ತಪಡಿಸಿದ್ದಾರೆ. ಯುವಕರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡು ಕಾರ್ಯ ಮೆಚ್ಚಿ ಸನ್ಮಾನಿಸಿದ್ದಾರೆ. ಬಳಿಕ ಚಹಾ ಕೂಟ ಏರ್ಪಡಿಸಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net