

ಕೊಪ್ಪಳ: ಜನಪ್ರತಿನಿಧಿಗಳ ಸಹಭಾಗಿತ್ವದೊಂದಿಗೆ ಸಾರ್ವಜನಿಕರ ಮನವೊಲಿಸಿ ಕೋವಿಡ್ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಸಿಕಾಕರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗಂಗಾವತಿಯ ಸಿದ್ದಿಕೇರಿ, ಕಿಲ್ಲಾ ಪ್ರದೇಶ, ಮೆಹಬೂಬ್ ನಗರ, ಇಸ್ಲಾಂಪುರ, ಬನ್ನಿಗಿಡದ ಕ್ಯಾಂಪ್, ಗ್ರಾಮೀಣ ಭಾಗದ ಗಾಂಧಿನಗರ, ಚಿಕ್ಕ ಬೆಣಕಲ್, ಹಳೇ ಕಲ್ಗುಡಿ, ಕೊಪ್ಪಳ ತಾಲೂಕಿನ ಮೆಳ್ಳಿಕೇರಿ, ಇಂದಿರಾನಗರ, ವೆಂಕಟಾಪುರ, ಚಾಮಲಾಪುರ, ಹಳೇ ಕುಮುಟಾ, ಅಚಲಾಪುರ, ಕುಷ್ಟಗಿ ತಾಲೂಕಿನ ಹೆಸರೂರು, ಚಿಕ್ಕ ಮುಕರ್ತಿನಾಳ, ಜೂಲಕಟ್ಟಿ, ಹನುಮಗಿರಿ, ಬ್ಯಾಲಿಹಾಳ, ಹೊನಗಡ್ಡಿ, ರಾಂಪುರ ಹಾಗೂ ಯಲಬುರ್ಗಾ ತಾಲೂಕಿನ ಕಲ್ಲೂರು, ಉಪ್ಪಲದಿನ್ನಿ, ಬುಡಕುಂಟಿ, ಮನ್ನಾಪುರ ಸೇರಿದಂತೆ ಇತರೆಡೆ ಲಸಿಕಾಕರಣ ಮಂದಗತಿಯಲ್ಲಿದೆ. ಜನರಲ್ಲಿ ಜಾಗೃತಿ ಮೂಡಿಸಿ ವ್ಯಾಕ್ಸಿನ್ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಗಂಗಾವತಿ ಹಾಗೂ ಕಾರಟಗಿ ಭಾಗದ ರೈಸ್ ಮಿಲ್‌ಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಬೇಕು. ಕೋವಿಡ್ ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಿ. ಜನನಿಬಿಡ ಸ್ಥಳಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸಿ. ಕರೊನಾದಿಂದ ಮೃತಪಟ್ಟ ಕುಟುಂಬದವರ ವಿವರ ಸಂಗ್ರಹಿಸಿ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.