ಜೀವನ ಅನುಭವಿಸಲು ಆರೋಗ್ಯ ಮುಖ್ಯ

05092020 Koppal Corona Awerness
Published on

ಕೊಪ್ಪಳದ ಗವಿಶ್ರೀ ಸಲಹೆ | ಜಿಲ್ಲಾಡಳಿತದಿಂದ ಕರೊನಾ ಜಾಗೃತಿ

ಕೊಪ್ಪಳ: ಜೀವನ ಅನುಭವಿಸಲು ಆರೋಗ್ಯ ಬೇಕು. ಸಾವಿಗೆ ವೈರಸ್ ಎಷ್ಟು ಕಾರಣವೋ, ನಮ್ಮ ನಿರ್ಲಕ್ಷೃವೂ ಅಷ್ಟೇ ಕಾರಣ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತದಿಂದ ತಾಲೂಕಿನ ಭಾಗ್ಯನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಕರೊನಾ ವಿಶ್ವವನ್ನು ತಲ್ಲಣಗೊಳಿಸಿದೆ. ಅಲಕ್ಷೃವಹಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಸಾಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆಲ್ಲ ನಮ್ಮ ಹಿಂಜರಿಕೆ, ಭಯ, ನಿರ್ಲಕ್ಷೃ ಮನೋಭಾವ ಕಾರಣ. ರೋಗ ಲಕ್ಷಣ ಕಾಣಿಸಿಕೊಂಡ ರತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಜಗತ್ತು ನಮ್ಮ ಬಗ್ಗೆ ಎನು ಮಾತನಾಡುತ್ತದೆಂಬುವುದಕ್ಕಿಂತ ನಮ್ಮ ಆರೋಗ್ಯ ಮುಖ್ಯ. 7 ದಿನ ಕ್ವಾರಂಟೈನ್‌ನಲ್ಲಿರುವುದು ಒಳ್ಳೆಯದೋ ಅಥವಾ 70 ವರ್ಷದ ಜೀವನ ಹಾಳು ಮಾಡಿಕೊಳ್ಳುವುದು ಒಳ್ಳೆಯದೋ ಎಂಬ ಬಗ್ಗೆ ನೀವೇ ನಿರ್ಧರಿಸಿ ಎಂದರು.

ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಜಿಲ್ಲೆ ಯಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಅದರ ಜತೆ ಮೃತರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಪರಾಮರ್ಶೆ ಮಾಡಿದಾಗ ಜಿಲ್ಲೆಯ 25 ಪ್ರದೇಶಗಳಲ್ಲಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಮಾಣವಿದೆ. ತಡವಾಗಿ ಚಿಕಿತ್ಸೆಗೆ ದಾಖಲಾಗುವುದೇ ಇದಕ್ಕೆ ಕಾರಣ. ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸೋಂಕು ಹರಡುವಿಕೆ ತಡೆಯಬಹುದು. ಹಿರಿಯರು, ಮಕ್ಕಳ ಬಗ್ಗೆ ಕಾಳಜಿವಹಿಸಿ ವಹಿಸಿ. ಬೇರೆ ಕಾಯಿಲೆ ಇರುವವರು ಎಚ್ಚರಿಕೆಯಿಂದಿರಿ ಎಂದರು. ಪಟ್ಟಣದ 5 ಕಡೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಎಡಿಸಿ ಎಂ.ಪಿ.ಮಾರುತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ, ತಹಸೀಲ್ದಾರ್ ಜೆ.ಬಿ.ಮಜ್ಗಿ, ಡಿಎಚ್‌ಒ ಡಾ.ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net