ಕರೊನಾ ನಡುವೆಯೂ ಗಜಮುಖನಿಗೆ ನಮನ, ಚಿಕ್ಕ ಮೂರ್ತಿಯಿಟ್ಟು ಸಂಭ್ರಮಿಸಿದ ಜನತೆ ಒಂದೇ ದಿನಕ್ಕೆ ಸೀಮಿತವಾದ ಹಬ್ಬ

23082020 Koppal Ganesh festival
Published on

ಕೊಪ್ಪಳ: ಕರೊನಾ ಆತಂಕದ ನಡುವೆಯೂ ಜಿಲ್ಲೆಯಲ್ಲಿ ವಿಘ್ನ ನಿವಾರಕ ವಿಘ್ನೇಶ್ವರನನ್ನು ಜನರು ಸಂಭ್ರಮದಿಂದ ಬರಮಾಡಿಕೊಂಡು, ಬೀಳ್ಕೊಟ್ಟರು.

ಗಣೇಶ ಚತುರ್ಥಿ ಎಂದರೆ ತಿಂಗಳುಗಟ್ಟಲೇ ಸಂಭ್ರಮಿಸಬಹುದೆಂದು ಅಂದುಕೊಂಡಿದ್ದ ಜನರಿಗೆ ಕರೊನಾ ಬ್ರೇಕ್ ಹಾಕಿದೆ. ವಿಘ್ನೇಶ್ವರನ ಆರಾಧನೆಗೆ ಸರ್ಕಾರ ಹಲವಾರು ಮಾರ್ಗಸೂಚಿ ಪ್ರಕಟಿಸಿ, ಒಂದೇ ದಿನದ ಸಂಭ್ರಮಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಕಳೆದ ವರ್ಷದ ವೈಭವ, ತರಹೇವಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ ಸೇರಿ ಇತರ ಸಾರ್ವಜನಿಕ ಕಾರ್ಯಕ್ರಮಗಳು ಕಂಡುಬರಲಿಲ್ಲ. ನಗರದಲ್ಲಿ ವಾರ್ಡಿಗೊಂದು ಹಾಗೂ ಗ್ರಾಮಗಳಲ್ಲಿ ಗ್ರಾಮಕ್ಕೆ ಒಂದು ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದರಿಂದ ಬೆರಳೆಣಿಕೆ ಗಣೇಶ ಮೂರ್ತಿಗಳು ಕಂಡುಬಂದವು. ಕೊಪ್ಪಳ ನಗರವೊಂದರಲ್ಲೇ ಕಳೆದ ವರ್ಷ 121ಕ್ಕೂ ಅಧಿಕ ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ, ಈ ಬಾರಿ ಕೇವಲ 40-50 ಕಡೆ ಮಾತ್ರ ಮೂರ್ತಿ ಪ್ರತಿಷ್ಠಾಪನಗೆ ಪೊಲೀಸರು ಅನುಮತಿಸಿದ್ದರು. ನಗರದ ಜವಾಹರ ರಸ್ತೆ, ಈಶ್ವರ ಪಾರ್ಕ್, ಗಡಿಯಾರ ಕಂಬ ರಸ್ತೆ, ಕೋಟೆ ರಸ್ತೆ ಸೇರಿ ಬೆರಳೆಣಿಕೆ ಕಡೆಗಳಲ್ಲಿ ಮಾತ್ರ ವಿಘ್ನೇಶ್ವರ ಕಾಣಿಸಿಕೊಂಡ.

ಜಿಲ್ಲಾದ್ಯಂತ ಕಳೆದ ವರ್ಷ 1400 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ 772 ಕಡೆ ಮಾತ್ರ ಗಜಾನನಿಗೆ ಪೂಜೆ, ಆರಾಧನೆ ದಕ್ಕಿದೆ. ಗಂಗಾವತಿ ನಗರದಲ್ಲಿ ಕೇವಲ 46 ಅರ್ಜಿ ಬಂದಿದ್ದು, 18-20 ಕಡೆ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಒಂದೇ ದಿನಕ್ಕೆ ಹಬ್ಬ ಸೀಮಿತಗೊಳಿಸಿದ್ದರಿಂದ ಸಂಜೆ 6ಗಂಟೆ ವೇಳೆಗೆ ಮೂರ್ತಿಗಳ ವಿಸರ್ಜನೆ ಆರಂಭವಾಯಿತು.

ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೆಚ್ಚು ಜನ ಸೇರಲು ಅವಕಾಶವಿಲ್ಲದ ಕಾರಣ ಮೂರ್ತಿ ಪ್ರತಿಷ್ಠಾಪನಾ ಮಂಡಳಿ ಸದಸ್ಯರು ಮಾತ್ರ ತೆರಳಿ ವಿಸರ್ಜನೆ ಮಾಡುವುದು ಕಂಡುಬಂತು. ಸರಳವಾಗಿ ಪೂಜೆ ಆಚರಿಸಿ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಕಡೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಹಬ್ಬದ ಕಾರಣ ಕೊಪ್ಪಳ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬಿಡಾರ ಹೂಡಿದ್ದು, ಯಾವುದೇ ಅದ್ದೂರಿ ಆಚರಣೆ ಹಾಗೂ ಗುಂಪು ಸೇರಲು ಅವಕಾಶ ನೀಡಲಿಲ್ಲ. ಅಲ್ಲದೇ ಸಾರ್ವಜನಿಕ ಗಣೇಶನಿರುವ ಕಡೆ ಸ್ಯಾನಿಟೈಸರ್ ಬಳಕೆ ಹಾಗೂ ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಬಿದಿರು ಕಟ್ಟಿ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net