

ಕೊಪ್ಪಳ: ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ಮಾ.24ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಜಿಟಲ್ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈವರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 22,462, ಕನಕಗಿರಿ 49,218, ಗಂಗಾವತಿ 61,544, ಯಲಬುರ್ಗಾ 20,932 ಹಾಗೂ ಕೊಪ್ಪಳದಲ್ಲಿ 19,703 ಸದಸ್ಯರ ನೋಂದಣಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1,73,859 ಸದಸ್ಯತ್ವ ನೋಂದಣಿ ಮಾಡಿದ್ದು, ಇತರ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆ ಮುಂದಿರುವುದು ವಿಶೇಷ. ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಬಿಜೆಪಿಯವರು ದೇಶ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಜನರು ಬರುವ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಗುಡುಗಿದರು.