

ಕೊಪ್ಪಳ: ಜಿಲ್ಲೆಯಲ್ಲಿ ಯಾವುದೇ ಧರ್ಮ, ಸಮುದಾಯದವರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ನಡೆದುಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಅರುಣಾಂಗುಷಗಿರಿ ಎಚ್ಚರಿಸಿದ್ದಾರೆ.
ನಗರದಲ್ಲಿ ಶಾಂತಿ ಕಾಪಾಡುವುದು ಹಾಗೂ ಕೋಮು ಗಲಭೆ ಸೃಷ್ಟಿಸುವವರಿಗೆ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಭಾನುವಾರ ನಗರಾದ್ಯಂತ ಹಮ್ಮಿಕೊಂಡಿದ್ದ ಪೊಲೀಸ್ ರೂಟ್ ಮಾರ್ಚ್ ನೇತೃತ್ವವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕು, ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನರು ಶಾಂತಿ ಕಾಪಾಡಿಕೊಳ್ಳಬೇಕು. ಕೋಮು ಗಲಭೆಗೆ ಕಾರಣವಾಗುವ ಕೃತ್ಯ ಎಸಗಬಾರದರು. ಯಾವುದೇ ಧರ್ಮ, ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಪೋಸ್ಟ್, ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಬಾರದು. ಇದು ಸಹ ಕಾನೂನು ವಿರುದ್ಧದ ನಡೆಯಾಗಲಿದೆ. ಈಗಾಗಲೇ ಕನಕಗಿರಿಯಲ್ಲಿ ಇಂಥ ಕೃತ್ಯ ಎಸಗಿದ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಯಾರಾದರೂ ಕಾನೂನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 153(ಎ), 505(2), 295(ಎ) ಅಡಿ ಪ್ರಕರಣ ದಾಖಲಿಸಲಾಗುವುದು. ಕಮ್ಯುನಲ್ ಗೂಂಡಾ, ರೌಡಿ ಶೀಟ್ ತೆರೆದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕೋಮು ಗಲಭೆ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಡಿವೈಎಸ್ಪಿಗಳಾದ ಗೀತಾ ಬೇನಾಳ್, ಶಶಿಧರ, ಸಿಪಿಐಗಳಾದ ವಿಶ್ವನಾಥ ಹಿರೇಗೌಡರ್, ನಾಗರಡ್ಡಿ, ನಗರಠಾಣೆ ಪಿಐ ಮಾರುತಿ ಗುಳ್ಳಾರಿ. ಟ್ರಾಫಿಕ್ ಪಿಎಸ್‌ಐ ವೆಂಕಟೇಶ ಇತರರಿದ್ದರು.