

ಕೊಪ್ಪಳ: ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಪರವಾನಗಿ ಪಡೆಯದೇ ನಿರ್ಮಿಸುತ್ತಿದ್ದ ಶೆಡ್ನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವು ಮಾಡಿದರು.
ಇತ್ತೀಚೆಗಷ್ಟೇ ಈ ಜಾಗದಲ್ಲಿದ್ದ ಕಟ್ಟಡ ಆಕಸ್ಮಿಕ ಬೆಂಕಿಗೆ ಆಹುತಿಯಾಗಿತ್ತು. ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಸದ್ಯ ಅದೇ ಜಾಗದಲ್ಲಿ ಶೆಡ್ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ನಗರಸಭೆಯಿಂದ ಅಧಿಕೃತವಾಗಿ ಪರವಾನಗಿ ಪಡೆದಿರಲಿಲ್ಲವೆನ್ನಲಾಗಿದೆ. ಹೀಗಾಗಿ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ಶೆಡ್ ತೆರವು ಮಾಡಿದರು. ಜೆಸಿಬಿ, ಟ್ರಾ$್ಯಕ್ಟರ್ ಬಳಸಿ ಕಟ್ಟಡದ ವಸ್ತುಗಳನ್ನು ಜಪ್ತಿ ಮಾಡಿದರು.
ಕೆಲ ತಿಂಗಳ ಹಿಂದೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸದ್ಯ ನಿರ್ಮಿಸುವ ಹೊಸ ಕಟ್ಟದಲ್ಲಿ ಮುಂಜಾಗ್ರತೆ ಹಾಗೂ ಸುರಾ ಕ್ರಮ ಅನುಸರಿಸಬೇಕು. ಆದರೆ, ಮಾಲೀಕರು ಪರವಾನಗಿ ಪಡೆದುಕೊಂಡಿಲ್ಲ. ಅನಧಿಕೃತವಾಗಿ ನಿರ್ಮಿಸಲು ಮುಂದಾಗಿದ್ದರು. ಹೀಗಾಗಿ ಶೆಡ್ ತೆರವು ಮಾಡಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಉಳಿದ ಸಾಮಗ್ರಿಗಳನ್ನು ತೆರವು ಮಾಡಿಕೊಳ್ಳಲು ಮಾಲೀಕರಿಗೆ ಸೂಚಿಸಲಾಗಿದೆ ಎಂದು ಪೌರಾಯುಕ್ತ ಗಣಪತಿ ಪಾಟೀಲ್ ವಿಜಯವಾಣಿಗೆ ತಿಳಿಸಿದರು.