

ಕೊಪ್ಪಳ: ನನ್ನ ವಾರ್ಡ್ ಸಮಸ್ಯೆಗಳಿಗೆ ಸ್ಪಂದಿಸದೇ ಬೇಜವಾಬ್ದಾರಿ ತೋರುತ್ತಿರುವ ಪೌರಾಯುಕ್ತ, ಎಇಇ ವರ್ಗಾವಣೆ ಮಾಡಬೇಕೆಂದು 16ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ಒತ್ತಾಯಿಸಿದರು.
ನಾನು ಸದಸ್ಯನಾದಾಗಿನಿಂದ ವಾರ್ಡ್ ಸಮಸ್ಯೆಗಳ ಸಂಬಂಧ ಅನೇಕ ಸಲ ಮನವಿ ಸಲ್ಲಿಸಿದ್ದೇನೆ. ಆದರೆ, ಯಾವೊಂದು ಸಮಸ್ಯೆ ಪರಿಹಾರವಾಗಿಲ್ಲ. ಕಚೇರಿಗೆ ತೆರಳಿದರೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಭೆ, ಸ್ಥಳ ಪರಿಶೀಲನೆಗೆ ತೆರಳಿದ್ದಾರೆಂದು ಸಬೂಬು ಹೇಳುತ್ತಾರೆ. ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಸದಸ್ಯನಾದ ನನಗೆ ಇಷ್ಟೊಂದು ಸಮಸ್ಯೆ ಇದೆ. ಸಾಮಾನ್ಯ ಜನರ ಗತಿ ಹೇಗೆಂದು ಮೇಲಧಿಕಾರಿಗಳು ಊಹಿಸಿಕೊಳ್ಳಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮಸ್ಯೆ ಹೇಳಿಕೊಂಡರು.
ಈ ಬಗ್ಗೆ ಡಿಸಿಗೆ ಪತ್ರ ಬರೆದಿರುವೆ. ಅವರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಕ್ರಮಕ್ಕೆ ಸೂಚಿಸಿದ್ದಾರೆ. ಈವರೆಗೂ ಕ್ರಮವಾಗಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು. ಸಮಸ್ಯೆಗಳನ್ನು ಪರಿಹರಿಸಬೇಕು. ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಹಾಗೂ ಎಇಇ ಮಧುರ ಅವರನ್ನು ಬೇರೆಡೆ ವರ್ಗಾಯಿಸಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.