ರಾಜ್ಯಪಾಲ ಹಠಾವೊ ರಾಜ್ಯ ಬಚಾವೊ

1908-Kpl-Ravi-1
Published on

ಕೊಪ್ಪಳ: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್​ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ಮಿತ್ರರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಬೆಳವಣಿಗೆ ಒಳ್ಳೆಯದಲ್ಲ. ಸಿಎಂ ಸಿದ್ದರಾಮಯ್ಯ ಶುದ್ಧ ಹಸ್ತರು. ಅವರು ಯಾವ ಕಡತಕ್ಕೂ ಸಹಿ ಹಾಕಿಲ್ಲ. ತಮ್ಮ ಜಮೀನಿಗೆ ಪರ್ಯಾಯವಾಗಿ 14 ಸೈಟ್​ ನೀಡುವಂತೆ ಮನವಿಯನ್ನೂ ಸಲ್ಲಿಸಿಲ್ಲ. ಮೂಡಾದವರೇ ಕೊಟ್ಟಿದ್ದಾರೆ. ಇದೀಗ ಸಿದ್ದರಾಮಯ್ಯ ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಿಸುತ್ತಿದ್ದಾರೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆ. ಯಾರೋ ನೀಡಿದ ಅರ್ಜಿ ಮಾನ್ಯ ಮಾಡಿ ಪ್ರಾಸಿಕ್ಯೂಷನ್​ಗೆ ಅನುಮತಿಸಿದ್ದಾರೆ. ಕೂಡಲೇ ರಾಷ್ಟ್ರಪತಿ ಅವರನ್ನು ವಾಪಸ್​ ಕರೆಸಿಕೊಳ್ಳಬೇಕು. ನಾವು ಕಾನೂನು ಹೋರಾಟ ಮಾಡಿ ಗೆದ್ದೇ ಗೆಲ್ಲುತ್ತೇವೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಜೀನಾಮೆ ಕೊಡುವಂತ ತಪು$್ಪ ಸಿದ್ದರಾಮಯ್ಯ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಿಯಮಾನುಸಾರ ತನಿಖೆಗೆ ಅನುಮತಿಸಲು ಬರುವುದಿಲ್ಲ. ಹೀಗಿದ್ದರೂ ಒತ್ತಡ ಹಾಕಿ ಪ್ರಾಸಿಕ್ಯೂಷನ್​ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ನ್ಯಾಯಾಲಯ ಮೆಟ್ಟಿಲೇರಿದ್ದು, ನಮಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತೊಪಡಿಸಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆಗಿದ್ದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಮುಡಾದಲ್ಲಿ ಬಿಜೆಪಿಯವರೇ ಸೈಟ್​ ನೀಡಿದ್ದಾರೆ. ಅಕ್ರಮವಾಗಿ ಭೂಮಿ ವಶಪಡಿಸಿಕೊಂಡ ಕ್ರಮವನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಅಶೋಕ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ಟೈರ್​ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಎಡಿಸಿ ಸಿದ್ರಾಮೇಶ್ವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ದೊಡ್ಡ ಬಸನಗೌಡ ಬಯ್ಯಾಪುರ, ಮಾಲತಿ ನಾಯಕ, ಕೃಷ್ಣಾ ಇಟ್ಟಂಗಿ, ರೆಡ್ಡಿ ಶ್ರೀನಿವಾಸ, ಜ್ಯೋತಿ ಗೊಂಡಬಾಳ, ಕಿಶೋರಿ ಬೂದನುರ, ಇಂದಿರಾ ಬಾವಿಕಟ್ಟಿ, ಶಾಂತಣ್ಣ ಮುದಗಲ್​, ಮಲ್ಲು ಪೂಜಾರ ಸೇರಿ ನೂರಾರು ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net