

ಕೊಪ್ಪಳ: ಬಹುದಿನಗಳ ಬಳಿಕ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕೊಪ್ಪಳ ಕಿಮ್ಸ್ ಕಾಲೇಜಿನ ಪೀಠೋಪಕರಣ ಖರೀದಿ ಹಾಗೂ ತಳಕಲ್ನಲ್ಲಿ ಜಿಟಿಟಿಸಿ ಮಾದರಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ, ಕಾಲೇಜಿಗೆ ಬೇಕಾದ ಅನುದಾನ 2025&26ನೇ ಸಾಲಿನ ಆಯವ್ಯಯದಲ್ಲಿ ಭರಿಸುವುದಾಗಿ ತಿಳಿಸಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೊಂದು ವರ್ಷ ಕಾಯುವಿಕೆ ಮುಂದುವರೆಯಲಿದೆ.
2013ರಲ್ಲಿ ಕಿಮ್ಸ್ ಆರಂಭವಾದರೂ ಪ್ರತ್ಯೇಕ ಆಸ್ಪತ್ರೆ ಇಲ್ಲ. ಜಿಲ್ಲಾಸ್ಪತ್ರೆಯನ್ನೇ ಜಿಲ್ಲಾ ಬೋಧಕ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಆರೋಗ್ಯ ಹಾಗೂ ವೈದ್ಯಕಿಯ ಶಿಕ್ಷಣ ಇಲಾಖೆ ಎರಡೂ ಆಡಳಿತ ನಡೆಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕಿಮ್ಸ್ಗೆ 130 ಕೋಟಿ ರೂ. ಮೊತ್ತದಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿ ಹಲವು ವರ್ಷಗಳಾಗಿವೆ. ಆದರೆ, ಅಗತ್ಯ ಅನುದಾನ ನೀಡದ ಕಾರಣ ನನೆಗುದಿಗೆ ಬಿದ್ದಿತ್ತು. ಈ ಹಿಂದಿನ ಸಂಪುಟ ಸಭೆಯಲ್ಲಿ ಹಲವು ಬಾರಿ ಪ್ರಸ್ತಾವನೆ ಅನುಮೋದಿಸಿದರೂ ಅನುದಾನ ಬಿಡುಗಡೆ ಮಾಡಿರಲಿಲ್ಲ. ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ನಡೆದ ಸಂಪುಟ ಸಭೆಯಲ್ಲಿ ಗದಗ, ಚಾಮರಾಜ ನಗರ ಹಾಗೂ ಕೊಪ್ಪಳ ವೈದ್ಯಕಿಯ ವಿಜ್ಞಾನ ಸಂಸ್ಥೆಗಳ 450 ಹಾಸಿಗೆ ಆಸ್ಪತ್ರೆಗಳಿಗೆ ವೈದ್ಯಕಿಯ ಪೀಠೋಪಕರಣ ಖರೀದಿಗೆ 149.03 ಕೋಟಿ ರೂ.ಗೆ ಅನುಮೋದನೆ ನೀಡಿದೆ.
ಜತೆಗೆ ಎಂಆರ್ಐ ಯಂತ್ರ ಖರೀದಿಗೆ ಅನುಮೋದಿಸಿದ್ದು, 10.70 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಿದೆ. ಜತೆಗೆ ಕಳೆದ ಬಿಜೆಪಿ ಸರ್ಕಾರ ಕುಕನೂರು ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಟಿಟಿಸಿ ಮಾದರಿ ಕೌಶಲಾಭಿವೃದ್ಧಿ ಕೇಂದ್ರ ಘೋಷಿಸಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಬಿವೃದ್ಧಿ ಮಂಡಳಿಯಿಂದ 53.25 ಕೋಟಿ ರೂ. ಅನುದಾನ ನೀಡುವ ಮೂಲಕ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.