ಕಾರ್ಮಿಕರ ಮಕ್ಕಳಿಗೆ ಲಸಿಕೆ ಹಾಕಲು ಅಧಿಕಾರಿಗಳಿಗೆ ಕೊಪ್ಪಳ ಎಡಿಸಿ ಎಂ.ಪಿ.ಮಾರುತಿ ಸೂಚನೆ

19032021 MP Maruti
Published on

ಕೊಪ್ಪಳ: ಜಿಲ್ಲೆಯ ಕಲ್ಲು ಕ್ವಾರಿ, ಇಟ್ಟಿಗೆ ಭಟ್ಟಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಮಕ್ಕಳು, ಗರ್ಭಿಣಿಯರಿಗೆ ಇಂದ್ರಧನುಷ್ ಲಸಿಕೆ ಹಾಕಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಜನವಸತಿ ಪ್ರದೇಶಗಳಲ್ಲಿ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಇಂದ್ರಧನುಷ್ ಲಸಿಕೆ ನೀಡಲಾಗುತ್ತದೆ. ಆದರೆ, ಗಡಿ ಗ್ರಾಮ, ಸಾರಿಗೆ, ಮೂಲ ಸೌಲಭ್ಯ ಇಲ್ಲದ ಪ್ರದೇಶಗಳನನು ಗುರುತಿಸಿ. ರಸ್ತೆ, ರೈಲ್ವೆ ಕಾಮಗಾರಿ, ಕಾರ್ಖಾನೆ, ಇಟ್ಟಿಗೆ ಭಟ್ಟಿ, ಕಲ್ಲು ಕ್ವಾರಿ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳು, ಗರ್ಭಿಣಿಯರಿಗೆ ಲಸಿಕೆ ನೀಡಲು ಆದ್ಯತೆ ನೀಡಿ. ಸಾರಿಗೆ ಸೌಲಭ್ಯ ಇಲ್ಲದ ಕಡೆ ವಾಹನ ವ್ಯವಸ್ಥೆ ಮಾಡಲಾಗುವುದು. ಹನುಮಸಾಗರ ಹೋಬಳಿಯ ಕಡೂರು, ಕನಕಗಿರಿ ತಾಲೂಕಿನ ಸಿರವಾರ ಗ್ರಾಮಗಳು, ತೋಟದ ಮನೆಗಳಲ್ಲಿ, ದತ್ತು ಪಾಲನಾ ಸಂಸ್ಥೆಗಳಲ್ಲಿ ವಾಸಿಸುವ ಮಕ್ಕಳು ಹಾಗೂ ಈಗಾಗಲೇ ಲಸಿಕೆ ಅಂಗವಾಗಿ ನಡೆಸಿದ ಸಮೀಕ್ಷೆ ಪಟ್ಟಿಯಿಂದ ಬಿಟ್ಟು ಹೋದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಿ. ಒಂದು ವೇಳೆ 2 ವರ್ಷ ಪೂರ್ಣಗೊಂಡ ಮಕ್ಕಳು ಲಸಿಕೆಯಿಂದ ತಪ್ಪಿಸಿಕೊಂಡಿದ್ದರೆ, ಅಂಥವರಿಗೂ ನೀಡಲು ಕ್ರಮ ಕೈಗೊಳ್ಳಿ. ಲಸಿಕಾ ಅಭಿಯಾನಕ್ಕೆ ವಿವಿಧ ಇಲಾಖೆಗಳು ಸಹಕಾರ ನೀಡಬೇಕು ಎಂದು ಸೂಚಿಸಿದರು.

ಡಿಎಚ್‌ಒ ಅಲಕಾನಂದಾ ಮಳಗಿ ಮಾತನಾಡಿ, ಫೆ.22 ರಿಂದ 26 ವರೆಗೆ ಮೊದಲನೇ ಸುತ್ತಿನ ಲಸಿಕೆ ನೀಡಲಾಗಿದೆ. ಮಾ.22 ರಿಂದ 26ವರೆಗೆ ಎರಡನೇ ಸುತ್ತಿನ ಲಸಿಕೆ ನೀಡಲಾಗುವುದು. ಈಗಾಗಲೇ ಗುರುತಿಸಿರುವ ಪ್ರದೇಶಗಳಲ್ಲಿ ನಿಯಮಾನುಸಾರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಬಿ.ದಾನರೆಡ್ಡಿ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ., ಡಿಎಲ್‌ಒ ಡಾ. ಎಸ್.ಕೆ.ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಸೇರಿ ಇತರ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net