ಜಾನುವಾರುಗಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿ

koppal ceo rahul ratnma pandey vaccination drive
Published on

ಕೊಪ್ಪಳ: ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಿಸಲು ರೈತರಿಗೆ ಜಾಗೃತಿ ಮೂಡಿಸಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ನಿರ್ವಹಣ ಸಮಿತಿ ಸಭೆ ನಡೆಸಿ ಮಾತನಾಡಿದರು.

ಅ.21ರಿಂದ ನ.20ವರೆಗೆ 6ನೇ ಸುತ್ತಿನ ಕಾಲು ಬಾಯಿ ಲಸಿಜಾ ಅಭಿಯಾನ ನಡೆಯಲಿದೆ. ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಿ. ಲಸಿಕೆ, ಸೀರಂಜ್​ ಶೇಖರಿಸಿಟ್ಟುಕೊಳ್ಳಿ. ಸಿಬ್ಬಂದಿ ನಿಯೋಜಿಸಿ. ಶೆಡ್ಯೂಲ್​ ರಚಿಸಿಕೊಂಡು ಪಂಚಾಯಿತಿವಾರು ಅಭಿಯಾನ ನಡೆಸಿ. ಪಶು ಸಖಿಯರ ಮೂಲಕ ಮನೆ ಮನೆ ಪ್ರಚಾರ ನಡೆಸಿ. ಡಂಗೂರ ಸಾರಿಸಿ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ. ಅವರ ಮೂಲಕ ಪಾಲಕರಲ್ಲಿ ಅರಿವು ಮೂಡಿಸಿ. ದೈನಂದಿನ ವರದಿ ಆನ್​ಲೈನ್​ಲ್ಲಿ ದಾಖಲಿಸಿ. ಲಸಿಕಾದಾರರಿಗೆ ನಿಯಮಾನುಸಾರ ಪ್ರೋತ್ಸಾಹಧನ ಪಾವತಿಸುವಂತೆ ಸೂಚಿಸಿದರು.

ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ ಮಾತನಾಡಿ, ಕಾಲು-ಬಾಯಿ ಜ್ವರ ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರ ಸೀಳು ಗೊರಸಿನ ರಾಸುಗಳಲ್ಲಿ ಪಿಕಾನೋರ್ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ, ಅಂಟು ಜಾಡ್ಯವಾಗಿದ್ದು, ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ ರಾಸುವಿಗೆ ಹರಡುತ್ತದೆ. ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ. ರೋಗದಿಂದ ಚೇತರಿಸಿಕೊಂಡ ರಾಸುಗಳು ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಲಿದೆ. ಹಸು-, ಎಮ್ಮೆಗಳಲ್ಲಿ ಗರ್ಭಕಟ್ಟುವ ತೊಂದರೆಗಳು, ಗರ್ಭಪಾತವೂ ಆಗಬಹುದು ಎಂದರು.

ನಿಯಮಿತ ಲಸಿಕೆ ಹಾಕಿಸುವ ಮೂಲಕ ರೋಗ ನಿಯಂತ್ರಿಸಬಹುದು. ಅ.21ರಿಂದ ನ.20ವರೆಗೆ ಅಭಿಯಾನ ಇರಲಿದೆ. ಜಿಲ್ಲೆಯಲ್ಲಿ 2,69,247 ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಗಣತಿದಾರರಿಗೆ ಪ್ರತಿ ರಾಸಿಗೆ 5ರೂ. ಪ್ರೋತ್ಸಾಹಧನ, ಕೆಎಂಎ್​ನಿಂದ ಪ್ರತಿ ಜಾನುವಾರಿಗೆ 1.25ರೂ. ಪ್ರೋತ್ಸಾಹಧನ ಇರಲಿದೆ ಎಂದು ತಿಳಿಸಿದರು.

ಡಿಎಚ್​ಒ ಡಾ.ಟಿ.ಲಿಂಗರಾಜು, ಮಹಿಳಾ ಮತ್ತು ಮಕ್ಕಳ ಇಲಾಖೆ ಪಿಒ ಗಂಗಪ್ಪ, ಕೆಎಂಎ್​ ಜಿಲ್ಲಾ ವ್ಯವಸ್ಥಾಪಕ ಡಾ.ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net