

ಕೊಪ್ಪಳ: ಸಿಎಎ ಬಗ್ಗೆ ಭಾಷಣ ಮಾಡುವ ವೇಳೆ ವಲಸೆ ಬಂದ ದಲಿತರು, ಭೋವಿ, ವಾಲ್ಮೀಕಿ ಸಮುದಾಯದವರಿಗೆ ಪೌರತ್ವ ನೀಡಲು ಕಾಯ್ದೆ ಜಾರಿ ಮಾಡಿರುವುದಾಗಿ ಆರ್‌ಎಸ್‌ಎಸ್‌ನ ಬಿ.ಎಲ್.ಸಂತೋಷ್ ಹೇಳುತ್ತಾರೆ. ಹಾಗಾದರೆ ಈ ಸಮುದಾಯದವರೆಲ್ಲ ಇಲ್ಲಿನ ಮೂಲ ನಿವಾಸಿಗಳಲ್ಲವಾ ಎಂಬುದನ್ನು ಸಚಿವರಾದ ಗೋವಿಂದ ಕಾರಜೋಳ ಹಾಗೂ ಬಿ.ಶ್ರೀರಾಮುಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಭಾನುವಾರ ಮಾತನಾಡಿದರು. ಬಿಜೆಪಿಯವರು ತಮ್ಮ ನಡೆ ಸಮರ್ಥಿಸುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು. ದಲಿತರು, ವಾಲ್ಮೀಕಿ, ಭೋವಿ ಸಮುದಾಯದವರು ಈ ದೇಶದ ಮೂಲ ನಿವಾಸಿಗಳೆಂಬುದನ್ನು ಮರೆಯಬಾರದು ಎಂದು ಟಾಂಗ್ ನೀಡಿದರು.
ಸರ್ಕಾರ ರಚನೆಯಾಗಿ ಹಲವು ತಿಂಗಳು ಕಳೆದರೂ ಸರ್ಕಾರ ಟೇಕಾಫ್ ಆಗಿಲ್ಲ. ಸಿಎಂ ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದು, ಅಭಿವೃದ್ಧಿ ಮಾಯವಾಗಿದೆ. ನಮ್ಮ ಪಕ್ಷ ಬಿಟ್ಟ 17 ಜನರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಅವರೆಲ್ಲರಿಗೂ ಮಂತ್ರಿಗಿರಿ ನೀಡದಿದ್ದರೆ, ಸಿಎಂ ಬಿಎಸ್‌ವೈ ವಚನಭ್ರಷ್ಟರಾಗಲಿದ್ದಾರೆ. ಬಿಜೆಪಿಯ ಸದಸ್ಯರ ನಡೆ ನೋಡಿದರೆ, ಅನರ್ಹ ಶಾಸಕರನ್ನು ಯೂಸ್ ಆ್ಯಂಡ್ ಥ್ರೋ ಮಾಡುವಂತೆ ಕಾಣುತ್ತಿದೆ. ಶಾಸಕರ ಅನುದಾನವನ್ನು ಸರಿಯಾಗಿ ನೀಡದ ಈ ಸರ್ಕಾರ ಇದ್ದು ಸತ್ತಂತಿದೆ ಎಂದು ವಾಗ್ದಾಳಿ ಮಾಡಿದರು.
ಜೂಜಾಟ ಅವ್ಯಾಹತ : ಜಿಲ್ಲೆಯಲ್ಲಿ ಇಸ್ಪೀಟ್ ಜೂಜಾಟ ಮಿತಿ ಮೀರಿದ್ದು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಮರಳು ದಂಧೆಯೂ ಎಗ್ಗಿಲ್ಲದೆ ನಡೆಯುತ್ತಿದ್ದು, ಟಿಪ್ಪರ್‌ಗಳ ಓಡಾಟಕ್ಕೆ ಸ್ವತಃ ಪೊಲೀಸರೇ ಎಸ್ಕಾರ್ಟ್ ವಾಹನದ ರಕ್ಷಣೆ ನೀಡುತ್ತಿದ್ದಾರೆ. ಇವರ ಮಾಮೂಲಿ ಆಸೆಗೆ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವೇ ಹೋರಾಟ ಆರಂಭಿಸುತ್ತೇವೆಂದು ಎಚ್ಚರಿಸಿದರು.
ಕೊಪ್ಪಳದಲ್ಲಿ ನೂತನ ಜಿಲ್ಲಾ ಕಚೇರಿಯನ್ನು ಆರಂಭಿಸಲಾಗಿದ್ದು, ಪಕ್ಷ ಸಂಘಟಿಸಲಾಗುವುದು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿದ್ದು, ಶೀಘ್ರವೇ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.| ಶಿವರಾಜ ತಂಗಡಗಿ. ಡಿಸಿಸಿ ಅಧ್ಯಕ್ಷ, ಕೊಪ್ಪಳ