

ಕೊಪ್ಪಳ: ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಕನಕದಾಸರ ಪುತ್ಥಳಿ ಪ್ರತಿಷ್ಠಾಪನೆಗೆ ಸಂಸದ ಸಂಗಣ್ಣ ಕರಡಿ ಸಹಕರಿಸಬೇಕು. ಮೊದಲಿದ್ದ ಸ್ಥಳದಲ್ಲೇ ಕಾಮಗಾರಿ ನಡೆದಿದ್ದು, ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಹಾಲವರ್ತಿ ಕನಕಗುರು ಪೀಠದ ಸಿದ್ದೇಶ್ವರ ಸ್ವಾಮೀಜಿ ಮನವಿ ಮಾಡಿದರು.
ಕನಕದಾಸರು ಯಾವೊಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಕುಲ ಕುಲವೆಂದು ಹೊಡೆದಾಡದಂತೆ ಸಾಮಾಜಿಕ ಕ್ರಾಂತಿ ಮೂಡಿಸಿದವರು. 1988ರಲ್ಲಿ ಸಾರಿಗೆ ಸಚಿವರಾಗಿದ್ದ ಸಿದ್ದರಾಮಯ್ಯ ನಿಗದಿತ ಸ್ಥಳದಲ್ಲೇ ಕನಕದಾಸ ವೃತ್ತ ಉದ್ಘಾಟಿಸಿದ್ದರು. ಆದರೆ, ಹೆಚ್ಚುವರಿ ಜಾಗ ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗೆ ಸಂಸದರು ಪತ್ರ ಬರೆದಿರುವುದು ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮುದಾಯದ ಮುಖಂಡ ಕೆ.ಎಸ್.ಕೊಡತಗೇರಿ ಮಾತನಾಡಿ, ನಗರ, ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಜಾಗ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಸಂಸದರು ತನಿಖೆಗೆ ಒತ್ತಾಯಿಸಲಿ. ಆದರೆ, ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವಂತೆ ಪತ್ರ ಬರೆದಿದ್ದು, ಕೂಡಲೇ ವಾಪಸ್ ಪಡೆಯಬೇಕು. ಜಾಗ ಒತ್ತುವರಿ ಮಾಡಿದ್ದರೆ ದಾಖಲೆ ನೀಡಲಿ ಎಂದು ಆಗ್ರಹಿಸಿದರು. ಮುಖಂಡರಾದ ಸಿ.ಎಸ್.ಲಿಂಗರಾಜ, ರವೀಂದ್ರಗೌಡ ಮಾಲಿ ಪಾಟೀಲ್ ಇದ್ದರು.