

ಕೂಡ್ಲಿಗಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೊಪ್ಪಳ ಡಿಪೋದ ಬಸ್ ಅನ್ನು ಇಲ್ಲಿನ ಕೋರ್ಟ್ ಸಿಬ್ಬಂದಿ ಬುಧವಾರ ಜಪ್ತಿ ಮಾಡಿದರು.
ಈ ಹಿಂದೆ ಶಿವಪುರ ಗ್ರಾಮದಲ್ಲಿ ಕೊಪ್ಪಳ ವಿಭಾಗಕ್ಕೆ ಸೇರಿದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಿಂದ ಕ್ಯಾಸನಕೆರೆ ಗ್ರಾಮದ ಜಿ. ಪ್ರಕಾಶ್ ಮೃತಪಟ್ಟಿದ್ದರು. ಹೀಗಾಗಿ ಮೃತನ ಪತ್ನಿ ಅನಸೂಯಮ್ಮ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಲಯ, ಮೃತರ ಕುಟುಂಬಕ್ಕೆ ಕೆಕೆಆರ್‌ಟಿಸಿ ಕೊಪ್ಪಳ ವಿಭಾಗ 33,76,859 ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಆದರೆ, ಪರಿಹಾರ ವಿತರಿಸಿರಲಿಲ್ಲ.
ಹೀಗಾಗಿ ಬುಧವಾರ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಅನ್ನು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ನ್ಯಾಯಾಲಯದ ಬೇಲೀಫ್ ಎಚ್.ಮಹೇಶ್ ನಾಯ್ಕ ಹಾಗೂ ಸಿಬ್ಬಂದಿ, ವಕೀಲ ಮಲ್ಲಪ್ಪ ಅರಳಿ ಅವರು ಜಪ್ತಿ ಮಾಡಿದರು.