ಬಜೆಟ್‌ನಲ್ಲಿರಲಿ ಕೃಷಿ ಕೂಲಿಕಾರರಿಗೆ ಆದ್ಯತೆ: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಸಮಿತಿ ಪ್ರತಿಭಟನೆ

28022022 Koppal protest
Published on

ಕೊಪ್ಪಳ: ಬಜೆಟ್‌ನಲ್ಲಿ ಕೃಷಿ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಪೂರಕ ಯೋಜನೆ ಘೋಷಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾ ಸಮಿತಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ರಾಜ್ಯದ ಜನಸಂಖ್ಯೆಯ ಶೇ.20 ಭೂರಹಿತ ಕೃಷಿ ಕೂಲಿಕಾರರಿದ್ದಾರೆ. ಎಲ್ಲ ಸರ್ಕಾರಗಳು ನಿರಂತರವಾಗಿ ಬಡವರ್ಗವನ್ನು ಕಡೆಗಣಿಸುತ್ತಿವೆ. ದಿನ ಕಳೆದಂತೆ ಕೃಷಿ ರಂಗ ಬಿಕ್ಕಟ್ಟಿಗೆ ಸಿಲುಕುತ್ತಿದ್ದು, ಜನರು ಸಂಕಷ್ಟ ಎದರಿಸುವಂತಾಗಿದೆ. ನರೇಗಾ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡವರು ಜೀವನ ನಡೆಸುವುದು ಕಠಿಣವಾಗಿದೆ ಎಂದರು.

ಕೇರಳ, ತಮಿಳುನಾಡು ರಾಜ್ಯ ಮಾದರಿಯಲ್ಲಿ ಕೃಷಿ ಕೂಲಿಕಾರರಿಗೆ ಸಮಗ್ರ ಕಲ್ಯಾಣ ಯೋಜನೆ ರೂಪಿಸಬೇಕು. ಪ್ರತ್ಯೇಕ ಕಲ್ಯಾಣ ಮಂಡಳಿ ಆರಂಭಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೃಷಿ ಕೂಲಿ ಕಾರ್ಮಿಕರಿಗೆ ವಿಸ್ತರಿಸಬೇಕು. ನರೇಗಾದಡಿ ಸಮರ್ಪಕವಾಗಿ ಕೂಲಿ ಪಾವತಿಸಬೇಕು. ವರ್ಷದಲ್ಲಿ ಕನಿಷ್ಠ 200 ದಿನ ಕೆಲಸ, ದಿನಕ್ಕೆ 600ರೂ. ಕೂಲಿ ಪಾವತಿಸಬೇಕು. ವಸತಿ ರಹಿತರಿಗೆ ಮನೆ ನೀಡಬೇಕು. ಸಮಿತಿ ಜಿಲ್ಲಾಧ್ಯಕ್ಷ ಎಂ.ಬಸವರಾಜ, ರಾಜ್ಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ, ತಾಲೂಕು ಅಧ್ಯಕ್ಷರಾದ ಹುಸೇನಪ್ಪ, ಮರಿನಾಗಪ್ಪ, ಬಾಳಪ್ಪ ಹುಲಿಹೈದರ್, ರಮೇಶ ಬಡಗಿ, ಅಂದಪ್ಪ ಬರದೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net