ಸಮುದಾಯ ಸಂಘಟನೆಗೆ ಕೈ ಜೋಡಿಸಿ

IMG-20241017-WA0061
Published on

ಕೊಪ್ಪಳ: ಸಮುದಾಯ ಅಭಿವೃದ್ಧಿ ಹೊಂದಲು, ಶಕ್ತಿ ಗೊತ್ತಾಗಲು ಸಂಘಟನೆ ಅಗತ್ಯ. ಎಲ್ಲರೂ ಒಂದೇ ವೇದಿಕೆಯಲ್ಲಿ ಕೂಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ ಹೇಳಿದರು.

ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಾಸಭಾ ಸಮಾವೇಶ ಜರಗುವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಬ್ರಾಹ್ಮಣ ಮಹಾಸಭಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವೈದ್ಯಕೀಯ ಸೌಲಭ್ಯ, ಬೆಂಗಳೂರಿನಲ್ಲಿ ವಸತಿ ಸೌಲಭ್ಯ ಸೇರಿ ಅನೇಕ ಸೌಲಭ್ಯಗಳು‌ ಸಿಗಲಿವೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.

ಮಹಾಸಭಾ ಪ್ರಮುಖ ವಸಂತ ಪೂಜಾರ ಮಾತನಾಡಿ, ಸ್ವಂತ ಶಕ್ತಿಯ ಮೇಲೆ ಸಮಾಜದಲ್ಲಿ ಮುಂದೆ ಬಂದಿದ್ದೇವೆ. ಇತ್ತೀಚಿನ ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಬ್ರಾಹ್ಮಣ ಸಮುದಾಯ ಉತ್ತಮವಾಗಿ ಸಂಘಟನೆಯಾಗುತ್ತಿದೆ ಎಂದರು.

ಮಹಾಸಭಾ ರಾಜ್ಯ ಉಪಾಧ್ಯಕ್ಷ ಆನಂದತೀರ್ಥ ಫಡ್ನವೀಸ್ ಮಾತನಾಡಿ ನಿರಂತರ ಚಟುವಟಿಕೆಯಿಂದಾಗಿ ಸಮಾಜ ಬಲಿಷ್ಠವಾಗುತ್ತದೆ. ಈಗ ಬ್ರಾಹ್ಮಣ ಮಾತ್ರವಲ್ಲ ಹಿಂದೂ ಸಮಾಜವೇ ಸಂಕಷ್ಟದ ಸ್ಥಿತಿಯಲ್ಲಿದೆ. ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿ ಸಂಘಟನೆ ಬಲಪಡಿಸಲು ಶ್ರಮಿಸುತ್ತಿದ್ದಾರೆ. ನಾವು ಜನ ರಾಜಕೀಯವಾಗಿ ಬಲಿಷ್ಠರಾಗಬೇಕು. ಪ್ರತಿ ಜಿಲ್ಲೆಯಲ್ಲಿ ರಾಜಕೀಯ ನಾಯಕ ಬೆಳೆಯಬೇಕು ಎಂದು ಹೇಳಿದರು.

ಸುವರ್ಣ ಮಹೋತ್ಸವ ಅಂಗವಾಗಿ 24 ಕೋಟಿ ಗಾಯತ್ರಿ ಜಪ ಯಜ್ಞದ ಸಂಕಲ್ಪ ಮಾಡಲಾಗಿದ್ದು, ಇದಕ್ಕೆ ಜಿಲ್ಲೆಯಿಂದಲೂ ಸಹಕಾರ ನೀಡಬೇಕು. ಆರ್ಥಿಕ ನೆರವಿಗೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಮಹಾಸಭಾದ ಜಿಲ್ಲಾ ಸಂಚಾಲಕ ಎಚ್.ಬಿ. ದೇಶಪಾಂಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಲತಾ ಮುಧೋಳ, ಯುವ ಘಟಕದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಎನ್‌. ಜೋಶಿ, ಜಿಲ್ಲಾ ಸಹ ಸಂಚಾಲಕಿ ಮಧುರಾ ಕರ್ಣಂ, ಮುಖಂಡರಾದ ಶ್ರೀಕಾಂತ ಪೂಜಾರ ಇಟಗಿ, ರಾಘವೇಂದ್ರ ನರಗುಂದ, ವೇಣುಗೋಪಾಲ್‌ ಜಹಗೀರದಾರ್‌, ರಮೇಶ ಜಹಗೀರದಾರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net