

ಕೊಪ್ಪಳ: ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕೈ ನಾಯಕರು ಕಿವಿಯಲ್ಲಿ ಹೂವಿಟ್ಟುಕೊಂಡು ಗಮನ ಸೆಳೆದಿದ್ದರು. ಆದರೆ, ಕೊಪ್ಪಳ ನಗರಸಭೆ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯನೋರ್ವ ಕಿವಿಯಲ್ಲಿ ಹೂವಿಟ್ಟುಕೊಂಡು ಆಗಮಿಸಿದ್ದು ವಿಶೇಷಾಗಿತ್ತು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಮಂಗಳವಾರ ನಗರದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯನೋರ್ವ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದು ಅಚ್ಚರಿ ಮೂಡಿಸಿದರು.
ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ನವರಾಗಿದ್ದಾರೆ.
ಹೀಗಾಗಿ ಬಿಜೆಪಿ ಸದಸ್ಯರಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಎಂಬುದೇ ಇಲ್ಲ ಎಂದು ಆರೋಪಿಸಿದರು.
ಇನ್ನೇನು ವಿಧಾನಸಭಾ ಚುನಾವಣೆ ಬರುತ್ತದೆ. ಈ ಅವಧಿಯದ್ದು ನಗರಸಭೆದು ಕೊನೆ ಸಭೆ ಇದು. ಏನು ಅಭಿವೃದ್ಧಿ ಮಾಡದೇ ನಮ್ಮ ಕಿವಿಯಲ್ಲಿ ಹೂ ಇಡುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ 16 ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ಎರಡು ಕಿವಿಯಲ್ಲಿ ಹೂ ಇಟ್ಟು ಕೊಂಡು ಸಭೆಯ ಮಧ್ಯದಲ್ಲಿ ಕುಳಿತು ಪ್ರತಿಭಟಿಸಿದರು.
ಇದನ್ನು ನೋಡಿದ ಕೈ ಸದಸ್ಯರಾದ ಮಹೇಂದ್ರ ಚೋಫ್ರಾ, ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್ ಸೇರಿದಂತೆ ಅನೇಕರು ನಗಲಾರಂಭಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿಯ ಅನೇಕ ಸದಸ್ಯರು ಕೈ ಸದಸ್ಯರ ನಡೆ ಖಂಡನಿಯ ಎಂದರು.
ಬಿಜೆಪಿ ಸದಸ್ಯೆ ವಿದ್ಯಾ ಹೆಸರೂರು, ಇದು ನಾಚಿಕೇಡಿತನದ ಸಂಗತಿ. ಅನುದಾನ ತಾರತಮ್ಯ ಖಂಡಿಸಿ ನಮ್ಮ ಸದಸ್ಯರು ವಿನೂತನವಾಗಿ ಪ್ರತಿಭಟಿಸಿದರೇ ನಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.