

ಕೊಪ್ಪಳ: ಮೀಸಲಾತಿ ತೆಗೆಯುವ ಬಗ್ಗೆ ವಿದೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಿದೇಶಕ್ಕೆ ತೆರಳುತ್ತಲೇ ದೇಶದ ಬಗ್ಗೆ ಅವಹೇಳನವಾಗಿ ಮಾತನಾಡುವ ರಾಹುಲ್ ಗಾಂಧಿ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ದೇಶದ ಬಗ್ಗೆ ಕನಿಷ್ಠ ಗೌರವ ಹೊಂದಿಲ್ಲ. ಅವರ ಕುಟುಂಬವೇ ದೇಶದಲ್ಲಿ ಬಹುವರ್ಷ ಆಡಳಿತ ನಡೆಸಿದೆ. ದಲಿತ, ಶೋಷಿತರ ಅಭಿವೃದ್ಧಿಗೆ ಯಾವೊಂದು ಕೊಡುಗೆ ನೀಡಿಲ್ಲ. ದೇಶದ ನಾಗರಿಕನಾದವನು ಮೊದಲ ತನ್ನ ದೇಶದ ಬಗ್ಗೆ ಗೌರವ ಹೊಂದಿರಬೇಕು. ಇದು ಸಂವಿಧಾನದ ಮೂಲ ಆಶಯ. ಆದರೆ, ವಿದೇಶಕ್ಕೆ ತೆರಳುತ್ತಲೇ ರಾಹುಲ್ ಇಟಲಿ ಮನಸ್ಥಿತಿ ಪ್ರದರ್ಶಿಸುತ್ತಾರೆ. ಭಾರತದಲ್ಲಿ ಅಸಮಾನತೆ ಇದೆ. ಅದು ಹೋದ ನಂತರ ಮೀಸಲಾತಿ ತೆಗೆಯತ್ತೇವೆ ಎಂದು ಹೇಳಿದ್ದಾರೆ. ಮೀಸಲಾತಿ ಇವರು ಕೊಟ್ಟ ಭಿೆಯಾ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಸಂಬಂಧಿಸಿದ ಕೋಟ್ಯಂತರ ರೂ. ಹಣ ನುಂಗಿ ನೀರು ಕುಡಿದಿದೆ. ಈ ಬಗ್ಗೆ ರಾಹುಲ್ ಮಾತನಾಡುವುದಿಲ್ಲ. ಬದಲಿಗೆ ಆರ್ಎಸ್ಎಸ್, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುತ್ತಾರೆ. ಈ ಮೂಲಕ ತಾವಿನ್ನೂ ಅಪ್ರಬುದ್ಧರು ಎಂಬುದನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಸಂವಿಧಾನ, ದಲಿತರ ಹೆಸರು ಹೇಳಿಕೊಂಡು ಅಧಿಕಾರ ಪಡೆಯುತ್ತಾರೆ. ಅದರ ವಿರುದ್ಧವೇ ಮಾತನಾಡುತ್ತಾರೆಂದು ರಾಹುಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ದೇಶದ ಜನರ ಕ್ಷಮೆ ಕೇಳಬೇಕು. ಅನಾವಶ್ಯಕವಾಗಿ ದೇಶದ ಬಗ್ಗೆ ಅವಹೇಳಕಾರಿ ಹೇಳಿಕೆಗಳನ್ನು ನೀಡುವುದು ಬಿಡಬೇಕು. ಇಲ್ಲದಿದ್ದರೆ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮಾಡುತ್ತಾರೆಂದು ಎಚ್ಚರಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಸುನಿಲ್ ಹೆಸರೂರು, ರಮೇಶ ಕವಲೂರು, ಗಣೇಶ ಹೊರತಟ್ನಾಳ, ಕೀರ್ತಿ ಪಾಟೀಲ್, ಶೊಭಾ ನಗರಿ, ಪ್ರದಿಪ ಹಿಟ್ನಾಳ, ಪ್ರಾಣೇಶ ಮಾದಿನೂರು, ಅಜ್ಜಯ್ಯ ಪಾಟೀಲ್, ವೀರಣ್ಣ ಸಜ್ಜನ ಇತರರಿದ್ದರು.