ಅಂತ್ಯೋದಯ ಪರಿಕಲ್ಪನೆಯ ಹರಿಕಾರ: ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿಕೆ

25092022 koppal pandit dindayal birthday
Published on

ಕೊಪ್ಪಳ: ಪಂಡಿತ್ ದೀನದಯಾಳ್ ಉಪಾಧ್ಯಾಯರು ರಾಜಕೀಯ ಸೇರಿ ಅನೇಕ ರಂಗಗಳಲ್ಲಿ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.

ನಗರದ ಸ್ವಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ 106ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ರಾಷ್ಟ್ರೀಯವಾದಿ ಚಿಂತಕ, ಶಿಕ್ಷಣತಜ್ಞ, ಲೇಖಕ, ಪತ್ರಕರ್ತ, ಅಸದೃಶ ಸಂಘಟಕ, ಭಾರತೀಯ ಜನಸಂಘದ ಸಂಸ್ಥಾಪಕ ದಯಾಳರು ನಮಗೆಲ್ಲ ಮಾದರಿ ವ್ಯಕ್ತಿ. ರಾಷ್ಟ್ರ ಸೇವೆಗಾಗಿ ಕೊನೆಯವರೆಗೂ ದುಡಿದವರು. ಬದುಕಿದ್ದು ಕೇವಲ 52 ವರ್ಷವಾದರೂ ಅವರ ವಿಚಾರಗಳು ಲಕ್ಷಾಂತರ ಜನಕ್ಕೆ ಪ್ರೇರಣೆಯಾಗಿವೆ. ಅವರು ವ್ಯಕ್ತಿ ನಿಷ್ಠ ತತ್ವ ನಂಬಿರಲಿಲ್ಲ. ತತ್ವನಿಷ್ಟರಾಗಿದ್ದರು. ಆದರ್ಶಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಅದರಂತೆ ಬದುಕಿದವರು. ತತ್ವ, ಸಿದ್ಧಾಂತಕ್ಕೆ ರಾಜಿಯಾಗದೆ ಜೀವಿಸಿದವರು. ರಾಜಕೀಯ ಎಂಬುದು ರಾಷ್ಟ್ರ ಸೇವೆಯ ಭಾಗ. ಕೇವಲ ಅಧಿಕಾರ ಗದ್ದುಗೆ ಏರುವ ಸಾಧನವಲ್ಲ ಎಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಸಹ ಅವರ ಹಾದಿಯಲ್ಲಿ ನಡೆದವರು. ನಾವೂ ಅವರಂತೆ ಬದುಕೋಣ ಎಂದರು.

ಪ್ರಮುಖರಾದ ಸಚಿನ್, ಲಕ್ಷ್ಮೀದೇವಿ, ಶೇಖರ್ ಪಾಟೀಲ್, ಮಹೇಶ ಕಂದಾರಿ, ಪ್ರಜ್ವಲ್ ಶೇಡ್ಮಿ, ಸಿದ್ದು ಪಾಟೀಲ್ ಚುಕ್ಕನಕಲ್ ಇತರರಿದ್ದರು.

ಮನ್ ಕಿ ಬಾತ್ ವೀಕ್ಷಿಸಿದ ಸಂಸದ: ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದಲ್ಲಿ ಭಾನುವಾರ ಸಂಸದ ಸಂಗಣ್ಣ ಕರಡಿ ಕಾರ್ಯಕರ್ತರೊಂದಿಗೆ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿದರು. ಪಂಡಿತ್ ದೀನದಯಾಳ್ ಜಯಂತಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಯಾಳ್‌ರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಸಂಗಣ್ಣ, ಒಂದು ಗಂಟೆಗೂ ಅಧಿಕ ಕಾಲ ಕಾರ್ಯಕ್ರಮ ವೀಕ್ಷಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ಬಾರೆಡ್ಡಿ, ಮಂಡಲ ಅಧ್ಯಕ್ಷ ಪ್ರದೀಪ್ ಪಲ್ಲೆದ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಕಾಟ್ರಳ್ಳಿ, ಮುಖಂಡರಾದ ಮೋಹನ್ ಬಂಡಿಹರ್ಲಾಪುರ, ಮೋಹನ್ ರೆಡ್ಡಿ, ಚನ್ನಪ್ಪ ಗೌಡ, ಬ್ರಹ್ಮಯ್ಯ, ಅಕ್ಬರ್ ಗೊರೇಬಾಳ, ಮೀರ್ ಅಹ್ಮದ್ ಖಾನ್, ಯೇಸು ರತ್ನಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net