

ಕೊಪ್ಪಳ: ವಿವಿಧ ಕೃಷಿ ತಿದ್ದುಪಡಿ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳ ಮುಖಂಡರು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರು.
ನಗರದ ಕೇಂದ್ರ ಬಸ್‌ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನೆಗಿಳಿದ ರಾಜ್ಯ ರೈತರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಕೆಲಹೊತ್ತು ಬಸ್ ಸೇರಿ ವಿವಿಧ ವಾಹನ ಸಂಚಾರ ತಡೆದರು. ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಣಕು ಶವಯಾತ್ರೆ ನಡೆಸಿ, ಬೆಂಕಿ ಹಚ್ಚಿದರು. ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಎಐಡಿವೈಒ ಸೇರಿ ಇತರ ಸಂಘಟನೆಗಳು ಜಂಟಿಯಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ದಾರಿಯುದ್ದಕ್ಕೂ ಕೆಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಕೈಬಿಡಬೇಕು. ರೈತರಿಗೆ ಮಾರಕವಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘನೆಗಳ ಮುಖಂಡರಾದ ಶರಣಗೌಡ, ಹನುಮಂತಪ್ಪ ಹೊಳೆಯಾಚೆ, ಭೀಮಸೇನ ಕಲಿಕೇರಿ, ಇಸ್ಮಾಯಿಲ್ ನಾಲಬಂದ್, ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಅಕ್ಬರ್ ಪಾಷಾ, ಗವಿಸಿದ್ದಪ್ಪ ಚಿನ್ನೂರು, ಮಾನ್ವಿ ಪಾಷಾ ಸೇರಿ ಇತರರಿದ್ದರು.
ತಟ್ಟದ ಬಂದ್ ಬಿಸಿ: ಭಾರತ್ ಬಂದ್ ಬಿಸಿ ಜಿಲ್ಲೆಯ ಜನತೆಗೆ ಅಷ್ಟೊಂದು ತಟ್ಟಲಿಲ್ಲ. ವಾಹನ ಸಂಚಾರ, ಅಂಗಡಿಗಳು ಎಂದಿನಂತೆ ತೆರೆದಿದ್ದವು. ಕೆಲ ಅಂಗಡಿಗಳು ಬೆಳಗ್ಗೆ 11ಗಂಟೆವರೆಗೆ ಬಂದ್ ಆಗಿದ್ದವು. ನಂತರ ಎಂದಿನಂತೆ ತೆರೆದು ವಹಿವಾಟು ನಡೆಸಿದವು. ಜನ ಜೀವನ ಎಂದಿನಂತಿರುವುದು ಕಂಡುಬಂತು.