

ಕೊಪ್ಪಳ: ನಾನು ಮೊದಲು ಸಮುದಾಯದೊಂದಿಗೆ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ, ಇತರ ನಾಯಕರ ತಮ್ಮ ಸಮುದಾಯ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಾನು ಅದೇ ದಾರಿಯಲ್ಲಿ ಹೋಗುತ್ತಿರುವೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ತಾಲೂಕಿನ ಭಾಗ್ಯನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಡ್ಡಿ ಸಮುದಾಯ ಸಭೆಯಲ್ಲಿ ಮಾತನಾಡಿದರು.
ರೆಡ್ಡಿ ಬಂಗಾರದ ಕಡ್ಡಿಯಾಗಿರಲಿ ಎಂದು ಕುಲ ದೇವತೆ ಹೇಮರಡ್ಡಿ ಮಲ್ಲಮ್ಮ ಹರಸಿದ್ದಾಳೆ. ವೇಮನರ ವಚನಗಳು ಇಂದಿಗೂ ಪ್ರಸ್ತುತ. ಯುಗಗಳು ಕಳೆದರೂ ಅವು ಪ್ರಸ್ತುತವಾಗಿರಲಿದೆ. ಸಿಎಂ ಸಿದ್ದರಾಮಯ್ಯ 2018ರಲ್ಲಿ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಮೂಲಕ ರಡ್ಡಿ ಸಮುದಾಯ ಸಮಾವೇಶ ಮಾಡಿಸಿದರು. ನನ್ನ ಹೆಸರು ಕೊನೆಯಲ್ಲಿ ಹಾಕಿದ್ದರು. ನಾನು ಹೋಗದಿರಲು ನಿರ್ಧರಿಸಿದ್ದೆ. ವೇಮನ ಶ್ರೀಗಳು ನಾನು ಬಾರದಿದ್ದರೆ ಕಾರ್ಯಕ್ರಮ ಜರುಗದು ಎಂದರು. ಅದಕ್ಕೆ ಹೋದೆ. ಸಮುದಾಯದ ಜನ ಸ್ವಾಗತಿಸಿದರು ಎಂದರು.
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ರಡ್ಡಿ ಸಮುದಾಯ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದೆ. ಎಷ್ಟೇ ಕಷ್ಟ ಬಂದರೂ ಇನ್ನೊಬ್ಬರ ಹತ್ತಿರ ಕೈ ಚಾಚದೆ ಇತರರ ಕಷ್ಟಕ್ಕೆ ನೆರವಾಗುತ್ತದೆ. ನಾಯಕ ಗುಣ ಹೊಂದಿದ ಸಮುದಾಯ. ಗ್ರಾಮದಲ್ಲಿ ಕೆಲ ಮನೆಗಳಿದ್ದರೂ ಗ್ರಾಮದ ಎಲ್ಲರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯತ್ತ ಸಾಗುವು ಗುಣ ಹೊಂದಿದೆ. ಎಲ್ಲರೂ ಒಗ್ಗೂಡಿಕೊಂಡು ಹೋಗೋಣ. ನಾನು ಎರಡು ಬಾರಿ ಶಾಸಕನಾಗುವ ಅವಕಾಶವಿತ್ತು. ಆದರೆ, ಕೆಲವರು ನನ್ನನ್ನು ತುಳಿದರು. ಅದರ ಬಗ್ಗೆ ಚರ್ಚೆ ಬೇಡ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಒಂದು ದಿನ ಅವಕಾಶ ಸಿಗಲಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಮಾತನಾಡಿದರು. ಪ್ರಮುಖರಾದ ವೀರಪ್ಪ ಕೇಸರಟ್ಟಿ, ಬಸವರಾಜ ಗೌರಾ, ಈಶಪ್ಪ ಮಾದಿನೂರು, ಜಗದೀಶಗೌಡ ಸಿಂಗನಾಳ, ಪ್ರದೀಪಗೌಡ ಮಾಲಿ ಪಾಟೀಲ್, ಮನೋಹರಗೌಡ ಹೇರೂರು ಇತರರಿದ್ದರು.