ರಾಯರಡ್ಡಿ ಮಾತುಗಳು ಹತಾಶೆಯ ಪ್ರತೀಕ, ಸಚಿವ ಹಾಲಪ್ಪ ಆಚಾರ್ ಟೀಕೆ

Halappa Acharya Minister
ಸಚಿವ ಹಾಲಪ್ಪ ಆಚಾರ
Published on

ಕೊಪ್ಪಳ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಹತಾಶೆಯಿಂದ ಮನಬಂದಂತೆ ಮಾತನಾಡುತ್ತಾರೆ. ಬಳಿಕ ತಪ್ಪಾಯಿತೆಂದು ಕ್ಷಮೆ ಕೇಳುತ್ತಾರೆ. ನಾನು ಅಂಥ ಜಾಯಮಾನಕ್ಕೆ ಸೇರಿದವನಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾನಾಡಿದರು. ನೀರಾವರಿ ಬಗ್ಗೆ ಅರಿವಿಲ್ಲದವರೂ ಮಾತನಾಡುತ್ತಾರೆಂಬ ರಾಯರಡ್ಡಿ ಹೇಳಿಕೆಗೆ ಸಚಿವ ಆಚಾರ್ ಅಸಮಾಧಾನ ವ್ಯಕ್ತಪಡಿಸಿದರು. ರಾಯರಡ್ಡಿ ಅಧಿಕಾರದಲ್ಲಿದ್ದಾಗ ಕ್ಷೇತ್ರದ ನೀರಾವರಿಗೆ ನಯಾಪೈಸೆ ಅನುದಾನ ತಂದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎರಡು ಬಾರಿ ಕೊಪ್ಪಳ ಏತ ನೀರಾವರಿ ವಿಷಯ ಚರ್ಚಿಸದೇ ತಿರಸ್ಕೃತಗೊಳಿಸಲಾಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಜನರಿಗೂ ಈ ಬಗ್ಗೆ ಗೊತ್ತಿದೆ. ರಾಯರಡ್ಡಿ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯ ನನಗಿಲ್ಲ ಎಂದರು.

ಹಗೇದಾಳ, ಕಲಾಲಬಂಡಿ ಸೇರಿದಂತೆ ಮೂರು ಕಡೆ ಶೀಘ್ರ ಪ್ರಾಯೋಗಿಕ ಪರೀಕ್ಷೆ ನಡೆಸಿ ಬಳಿಕ ಕೆರೆಗಳನ್ನು ತುಂಬಿಸಲಾಗುವುದು. ಕೊಪ್ಪಳ ಹಾಗೂ ಯಲಬುರ್ಗಾ ಸ್ನಾತಕೋತ್ತರ ಕೇಂದ್ರಗಳಲ್ಲಿ ಕೈಬಿಟ್ಟಿರುವ ವಿಷಯಗಳನ್ನು ಮರು ಆರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ವಿಎಸ್‌ಕೆ ವಿವಿ ಕುಲಪತಿಗೆ ಪತ್ರ ಬರೆದಿರುವೆ. ಯಾವುದೇ ಕಾರಣಕ್ಕೂ ವಿದಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net