ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಕಠಿಣ ಶಿಕ್ಷೆಗೊಳಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹ

15092020 Koppal DSS Protest
Published on

ಕೊಪ್ಪಳ: ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅಧಿಕವಾಗಿವೆ. ದೇಶ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ನಿರುದ್ಯೋಗ, ಹಸಿವು, ಅರಾಜಕತೆ ಹೆಚ್ಚುತ್ತಿದೆ. ದಲಿತರು, ಬಡವರು, ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆ ಇಲ್ಲದಂತಾಗಿದೆ. ಸಿಂಧನೂರು ತಾಲೂಕಿನ ತುರ್ವಿಹಾಳದಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ವಿಜಯಪುರದಲ್ಲಿ ದಲಿತ ಯುವತಿ ರೇಣುಕಾ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಗುಂಡ್ಲಪೇಟೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಬೆತ್ತಲೆ ಪ್ರತಿಭಟನೆ ಮಾಡಿಸಿದರು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಮೇಲಿನ ದೌರ್ಜನ್ಯ ನಿಲ್ಲಬೇಕು. ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ವಿಧಿಸಬೇಕು. ದಲಿತರ ಮೇಲೆ ದಾಳಿ ನಡೆದಲ್ಲಿ ಡಿಸಿ ಹಾಗೂ ಎಸ್ಪಿಗಳನ್ನು ಹೊಣೆಗಾರರನ್ನಾಗಿಸಬೇಕು. ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಜಿಲ್ಲಾ ಹಂತದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ತುರ್ವಿಹಾಳ ಪಿಎಸ್‌ಐ ಯರ‌್ರಪ್ಪರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಡಾ.ಜ್ಞಾನಸುಂದರ, ಲಕ್ಷ್ಮಣ ಮಾದಿನೂರು, ಮಾರುತಿ, ಯಮನೂರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net