ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಿರಿ

261120 Koppal JCTu Protest on Anti Labor Act
ಕೊಪ್ಪಳದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲಿಸಿ ಪ್ರತಿಭಟನೆ, ಬಹಿರಂಗ ಸಭೆ ನಡೆಸಿ ಬೆಂಬಲ ಸೂಚಿಸಿದವು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ವಾಧಿಕಾರಿ ನೀತಿ ಅನುಸರಿಸುತ್ತಿವೆ. ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಿಸಿದವರೊಡನೆ ಚರ್ಚಿಸಿ, ಸಲಹೆ, ತಿದ್ದುಪಡಿಗಳನ್ನು ಮಾಡಬೇಕು. ಇತ್ತೀಚೆಗೆ 44 ಕಾರ್ಮಿಕ ಕಾನೂನುಗಳನ್ನು ಸಮೀಕರಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾಡಲಾಗಿದೆ. ಆದರೆ, ಯಾವೊಂದು ಸಂಘಟನೆ, ತಜ್ಞರೊಡನೆ ಚರ್ಚೆ ನಡೆಸಿಲ್ಲ. ಕೋವಿಡ್-19 ಪರಿಸ್ಥಿತಿ ಸದುಪಯೋಗ ಪಡಿಸಿಕೊಂಡು ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ಕಾಯ್ದೆ ಜಾರಿ ಮಾಡಲಾಗಿದೆ. ನರೇಂದ್ರ ಮೋದಿ ಸರ್ಕಾರ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಎಪಿಎಂಸಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕು. ಶಿಕ್ಷಣ, ಆರೋಗ್ಯ, ಕುಡಿವ ನೀರು, ರೈಲ್ವೆ, ರಸ್ತೆ, ವಿದ್ಯುತ್, ದೂರ ಸಂಪರ್ಕ, ವಿನೆ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ಯಮೆಗಳು ಖಾಸಗಿಕರಣ ನಿಲ್ಲಬೇಕು. ನರೇಗಾದಡಿ 200 ದಿನ ಕೆಲಸ ನೀಡಬೇಕು. ಕನಿಷ್ಠ 600 ರೂ. ಕೂಲಿ ನೀಡಬೇಕು. ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು. ಎನ್‌ಪಿಎಸ್ ರದ್ದುಪಡಿಸಬೇಕು. ಕನಿಷ್ಠ 21 ಸಾವಿರ ರೂ. ವೇತನ ಜಾರಿಮಾಡಬೇಕೆಂದು ಒತ್ತಾಯಿಸಿದರು. ಕಾರ್ಮಿಕ ಮುಖಂಡರಾದ ಬಸವರಾಜ ಶೀಲವಂತರ, ಕಾಸಿಂಸಾಬ್ ಸರ್ದಾರ, ಶರಣು ಗಡ್ಡಿ, ವಿಠ್ಠಪ್ಪ ಗೊರಂಟ್ಲಿ, ಹನುಮೇಶ ಕಲ್ಮಂಗಿ, ಶೇಖಪ್ಪ ಚೌಡ್ಕಿ, ಅನ್ನಪೂರ್ಣಮ್ಮ, ಮಮ್ತಾಜ್‌ಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net