

ಕೊಪ್ಪಳ: ರಾಮನ ಬಂಟ ಆಂಜನೇಯ ಹುಟ್ಟಿದ್ದು ಗಂಗಾವತಿ ಬಳಿಯ ಅಂಜನಾದ್ರಿಯಲ್ಲಿ. ತಿರುಮಲದಲ್ಲಿ ಹುಟ್ಟಿದ್ದನೆಂದು ಟಿಟಿಡಿಯವರು ಹೇಳಿಕೊಳ್ಳಲಿ. ನಮ್ಮ ಬಳಿಯೂ ದಾಖಲೆಗಳಿವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಬದ್ಧ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿ ಅಭಿವೃದ್ಧಿ ಸೇರಿ ಇತರೆ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಯೋಜನೆ ಇತ್ತು. ಆದರೆ, ಅವರಿಗೆ ಕರೊನಾ ತಗುಲಿದ ಕಾರಣ ಸಭೆ ಮುಂದೂಡಿದ್ದೇವೆ. ಟಿಟಿಡಿಯವರು ತಿರುಮಲದಲ್ಲೇ ಆಂಜನೇಯ ಹುಟ್ಟಿದ್ದು ಎಂಬುದಕ್ಕೆ ದಾಖಲೆ ನೀಡುತ್ತೇವೆ ಎಂದಿದ್ದಾರೆ. ಏನು ನೀಡಲಿದ್ದಾರೆಂಬುದನ್ನು ಕಾದು ನೋಡೋಣ ಎಂದರು.
ಕರೊನಾ ಪ್ರಕರಣಗಳು ಏರುತ್ತಿದ್ದು, ಜನರು ಎಚ್ಚರವಹಿಸಬೇಕಿದೆ. ಸದ್ಯಕ್ಕೆ ಲಾಕ್‌ಡೌನ್ ವಿಧಿಸುವ ಚಿಂತನೆ ಸರ್ಕಾರದ ಮುಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಬೇಕಿರುವುದರಿಂದ ಪ್ರಚಾರದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಜನ ಸಹಕಾರ ನೀಡದಿದ್ದರೆ ಲಾಕ್‌ಡೌನ್ ಅನಿವಾರ್ಯ ಆಗಬಹುದು ಎಂದರು.