

ಕೊಪ್ಪಳ: ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷವಾಗಿದೆ. ಅದರಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೂ 75 ವರ್ಷವಾಗಲಿದ್ದು, ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಸಿದ್ದರಾಮೋತ್ಸವ ಅಲ್ಲವೆಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ಧರಾಮಯ್ಯ ಯಾವತ್ತೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಮಕಾಲಿನರು ಹಾಗೂ ಅಭಿಮಾನಿಗಳು ಸೇರಿ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. 80ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ ಸಿದ್ಧರಾಮಯ್ಯ, ಶಾಸಕ, ಸಚಿವ, ಸಿಎಂ, ವಿಪಕ್ಷ ನಾಯಕರಾಗಿ ರಾಜ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಜನಪರ ಕೆಲಸ ಮಾಡಿದ್ದು. ತತ್ವ, ಆದರ್ಶ, ಸೈದ್ಧಾಂತಿಕವಾಗಿ ಬದುಕಿದ್ದಾರೆ. ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಅವರಿಗ ಗೌರವ ಸೂಚಿಸಲು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇದೊಂದು ಪಕ್ಷಾತೀತ ಕಾರ್ಯಕ್ರಮ. ಎಲ್ಲ ಸ್ವಾಮೀಜಿ, ಮುಖಂಡರನ್ನು ಆಹ್ವಾನಿಸಲಾಗಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಉದ್ಘಾಟನೆಗೆ ಆಗಮಿಸುವ ಕಾರಣ ಬೇರೆ ಪಕ್ಷದ ನಾಯಕರು ಬರುವುದು ಅನುಮಾನ. ನಾವು ಬಂದವರನ್ನೆಲ್ಲ ಸ್ವಾಗತಿಸುತ್ತೇವೆ ಎಂದರು.
ಬಿಜೆಪಿಯವರು ವಿನಾ ಕಾರಣ ಇದನ್ನು ಸಿದ್ದರಾಮೋತ್ಸವ ಎಂದು ಬಿಂಬಿಸುತ್ತಿದ್ದಾರೆ. ನಮ್ಮ ಕೆಲ ಕಾರ್ಯಕರ್ತರು ಸಿದ್ದರಾಮೋತ್ಸವ ಎಂದು ಕರಪತ್ರ ಅಂಟಿಸಿಕೊಂಡಿರುವುದು ನಿಜ. ನಾವು ಹಾಗೇ ಮಾಡದಂತೆ ಸೂಚಿಸಿದ್ದೇವೆ. ಆದರೂ ಕೆಲವರು ಹಾಕಿಕೊಂಡಿದ್ದಾರೆ. ಎಲ್ಲರಿಗೂ ಪದೇ ಪದೆ ಹೇಳಲಾಗುವುದಿಲ್ಲ. ದಾವಣಗೆರೆಯಲ್ಲಿ 130 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಜು.27ಕ್ಕೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಸೇರಿ ಇತರ ನಾಯಕರಿಗೆ ಆಹ್ವಾನ ಪತ್ರಿಕೆ ನೀಡಲಿದ್ದೇವೆ. 5 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದ 35 ಸಾವಿರ ಜನರು ಭಾಗಿಯಾಗುವರು. ಜಾತಿಯತೆ, ಭ್ರಷ್ಟತೆ, ಮೌಲ್ಯ ರಹಿತ ರಾಜಕೀಯ ವ್ಯವಸ್ಥೆ ತರುವ ವೇದಿಕೆಯಲ್ಲಿ ಚರ್ಚಿಸಲಾಗುವುದು. ದೇಶದ ರಾಜಕೀಯಕ್ಕೆ ಮೌಲ್ಯವನ್ನು ಪರಿಚಯಿಸುವ ಕೆಲಸಕ್ಕೆ ನಾಂದಿ ಹಾಡಲಾಗುವುದು. ಲೋಹಿಯಾ, ನೆರಹು, ಇಂದಿರಾ ಗಾಂಧಿ ಮುಂತಾದವರ ವಿಚಾರಗಳನ್ನು ಜನೆತೆಗೆ ಮುಟ್ಟಿಸಲಾಗುವುದು ಎಂದು ತಿಳಿಸಿದರು. ಶಾಸಕ ಅಮರೇಗೌಡ ಬಯ್ಯಪುರ ಇದ್ದರು.
ಸಂಘದ ಕಚೇರಿ ಮೇಲೆ ತಿರಂಗ ಹಾರಿಸಿ: ಸ್ವಾತಂತ್ರೃ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿಯವರು ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೊದಲು ನಾಗ್ಪುರ, ಕೇಶವಕೃಪ ಆರ್‌ಎಸ್‌ಎಸ್ ಕಚೇರಿ ಮೇಲೆ ನಿತ್ಯ ರಾಷ್ಟ್ರಧ್ವಜ ಹಾರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಸವಾಲೆಸೆದರು.
ಇವರು ಬರುವುದಕ್ಕಿಂತ ಮೊದಲೇ ಜನರು ತಿರಂಗಾ ಹಾರಿಸಿದ್ದಾರೆ. ನಿಜವಾದ ರಾಷ್ಟ್ರಭಕ್ತಿ ಇದ್ದಲ್ಲಿ ಸಂಘ ಪರಿವಾರದ ಕಚೇರಿಯಲ್ಲಿ ಬಾವುಟ ಹಾರಿಸಲಿ. ನಾವು ಅದನ್ನು ಸ್ವಾಗತಿಸಿ, ಇವರ ರಾಷ್ಟ್ರಭಕ್ತಿ ಒಪ್ಪುತ್ತೇವೆ. ಆಗಸ್ಟ್ 6ರಿಂದ ಜಿಲ್ಲೆಯಲ್ಲಿ ರಾಷ್ಟ್ರಕ್ಕಾಗಿ ಮಡಿದವರನ್ನು ಪರಿಚಯಿಸಲು ಪಾದಯಾತ್ರೆ ಆರಂಭಿಸಲಾಗುವುದು. ಮೊದಲು ಕುಷ್ಟಗಿಯಿಂದ ಆರಂಭವಾಗಲಿದ್ದು, ನಂತರ ಕೊಪ್ಪಳ, ಯಲಬುರ್ಗಾ, ಗಂಗಾವತಿ ಹಾಗೂ ಕನಕಗಿರಿಯಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಬಿಜೆಪಿ ಹಾಗೂ ಜೆಡಿಎಸ್‌ನವರು ಡೂಪ್ಲಿಕೇಟ್ ಗಿರಾಕಿಗಳು. ಅಲ್ಲಿರುವವರೆಲ್ಲ ಕಾಂಗ್ರೆಸ್‌ನಿಂದ ಹೋದವರು. ಅವರು ನಮ್ಮ ಮಕ್ಕಳನ್ನು ಕರೆದೊಯ್ದು ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ. ಅವರು ಜೆಡಿಸ್‌ಗೆ ಹೋಗುವುದಿಲ್ಲ.| ಶಿವರಾಜ ತಂಗಡಗಿ, ಡಿಸಿಸಿ ಅಧ್ಯಕ್ಷ ಕೊಪ್ಪಳ