ಮೂರು ತಿದ್ದುಪಡಿ ಕಾಯ್ದೆಗಳ ವಾಪಸ್‌ಗೆ ನಾಳಿದ್ದು ಬೆಂಗಳೂರು ಚಲೋ: ರೈತ ಸಂಘದ ಮುಖಂಡ ವೀರಸಂಗಯ್ಯ ಮಾಹಿತಿ

JM Veerasangayya Farmer Leader Koppal
ಜೆ.ಎಂ.ವೀರಸಂಗಯ್ಯ
Published on

ಕೊಪ್ಪಳ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವ ಎಪಿಎಂಸಿ, ಭೂ ಸುಧಾರಣಾ ಹಾಗೂ ಜಾನುವಾರು ಹತ್ಯೆ ತಡೆ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಾ.21ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖಂಡ ಜೆ.ಎಂ.ವೀರಸಂಗಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಪೋರೇಟ್ ಪರವಾದ ಕಾನೂನು ಜಾರಿ ಮಾಡಿದೆ. ಇದರಿಂದ ರೈತರಿಗೆ ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ಸಾಕಷ್ಟು ಅನ್ಯಾಯವಾಗಲಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಉದ್ಯಮಿಗಳು ನೂರಾರು ಎಕರೆ ಭೂಮಿ ಖರೀದಿಸುತ್ತಿದ್ದಾರೆ. ಅವರ‌್ಯಾರು ಕೃಷಿ ಮಾಡುವುದಿಲ್ಲ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದಲೂ ರೈತರ ಆದಾಯಕ್ಕೆ ಕೊಕ್ಕೆ ಬೀಳಲಿದೆ. ಇದನ್ನು ಖಂಡಿಸಿ ಜನಾಂದೋಲನ ರೂಪಿಸಿದ್ದು, ವಿವಿಧ ಸಂಘಟನೆಗಳ ಸಂಯುಕ್ತ ಹೋರಾಟ ಹಮ್ಮಿಕೊಳ್ಳಲಾಗಿದೆ.

ಮಾ.21ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಮಾ.22 ಮತ್ತು 23ರಂದು ಪರ್ಯಾಯ ಜನಾಧಿವೇಶನ ಆಯೋಜಿಸಲಾಗಿದೆ. ರೈತ, ದಲಿತ, ಕಾರ್ಮಿಕ, ಮಹಿಳೆ, ಯುವಜನರು, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಗುವುದು. ರಾಜ್ಯ ಸರ್ಕಾರ ಕಾಯ್ದೆ ವಾಪಸ್ ಪಡೆಯದಿದ್ದಲ್ಲಿ ಮುಂದಿನ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಖಂಡರಾದ ಭೀಮಸೇನ ಕಲಿಕೇರಿ, ತಿಪ್ಪಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net